

ದೊಡ್ಡೇರಿ: ಶಿಕ್ಷಣಕ್ಕೆ ಶ್ರೀಮಂತಿಕೆ ನೀಡುವ ಶಕ್ತಿ ಇದೆ. ಗ್ರಾಮೀಣ ಪ್ರದೇಶದ ಮಕ್ಕಳೆ ದೇಶದಲ್ಲಿ ಹೆಚ್ಚು ಸಾಧನೆ ಗೈದಿರುವ ನಿದರ್ಶನಗಳಿವೆ. ಆದ್ದರಿಂದ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ ಅವರಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಆಪನಹಳ್ಳಿಯಲ್ಲಿ ನಂಜುಡೇಶ್ವರ ಸ್ವಾಮಿಯ ಕಳಸ ಸ್ಥಾಪನೆ, ಕನಪನಾಯಕನಹಳ್ಳಿ ರಸ್ತೆಯ ಬಡವನಹಳ್ಳಿಯ ಸಿಸಿ ರಸ್ತೆಗೆ ಭೂಮಿ ಪೂಜೆ ಮತ್ತು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ವಾಲಿಬಾಲ್ ಮತ್ತು ಶೆಟಲ್ ಕಾಕ್ ಕ್ರೀಡಾಂಗಣ, ಅಂಗನವಾಡಿ ಮತ್ತು ನೂತನ ಗ್ರಾಪಂ ಕಟ್ಟಡದ ಭೂಮಿ ಪೂಜೆ ಹಾಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಬಡವನಹಳ್ಳಿ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ನನಗೆ ಅಧಿಕಾರ ಕೊಟ್ಟಾಗ ಯಾವುದೇ ಪಕ್ಷ, ಜಾತಿ ತಾರತಮ್ಯ ಮಾಡದೇ ಎಲ್ಲ ಸಮುದಾಯಗಳ ಬಡವರ ಪರವಾಗಿ ಕೆಲಸ ಮಾಡುವುದು ನನ್ನ ಅಭಿಲಾಷೆ. ಬಡವನಹಳ್ಳಿಗೆ ಪ್ರಥಮ ದರ್ಜೆ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಪೊಲೀಸ್ ಠಾಣೆ ಮೇಲ್ದ್ರ್ಜೆಗೇರಿಸಿರುವುದು. ಪೊಲೀಸ್ ವಸತಿ ಗೃಹ, ಡಿಸಿಸಿ ಬ್ಯಾಂಕ್, ಪುಲಮಗಟ್ಟ ಗ್ರಾಮಕ್ಕೆ ಎಂ.ವಿ.ವಿ ಸ್ಟೇಷನ್ ಸೇರಿ ಇತರ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜತೆಗೆ ನನ್ನ ಅವಧಿಯಲ್ಲಿ 16 ಸಾವಿರ ಮನೆಗಳನ್ನು ಮಂಜೂರು ಮಾಡಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಮನೆ ಕಟ್ಟುವವರೆ ಇರಲಿಲ್ಲ. ಈಗ ಮತ್ತೆ ನಿವೇಶನ ಮತ್ತು ಮನೆಗಳಿಗೆ ಬೇಡಿಕೆ ಬಂದಿರುವುದರಿಂದ ಎಲ್ಲ ಗ್ರಾಮ ಪಂಚಾಯಿತಿ ಪಟ್ಟದಲ್ಲಿ ನಿವೇಶನಗಳನ್ನು ಗುರುತಿಸಲಾಗುತ್ತಿದೆ. 2 ಸಾವಿರ ಮನೆಗಳು ಮಂಜೂರಾಗಿದ್ದು, ಇನ್ನೇನು ಕೆಲವು ದಿನಗಳಲ್ಲಿ ನಿವೇಶನ ಮತ್ತು ಮನೆಗಳ ಆದೇಶ ಪತ್ರ ನೀಡಲಾಗುವುದು ಎಂದರು.
ಈ ಭಾಗಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ನೀರು ತರಲು ಆಸಾಧ್ಯವೆನಿಸಿದ ಕಾರಣ ಯತ್ತಿನ ಹೊಳೆಯಿಂದ ನೀರು ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯೋಜನೆಗೆ 135 ಕೋಟಿ ರೂ. ಡೆಂಡರ್ ಆಗಿದೆ. ಈ ನೀರು ಕೆ.ಟಿ.ಹಳ್ಳಿ ಕೆರೆ, ಕವಣದಾಲ, ರಂಗನಪಾಳ್ಯ, ರಂಗಾಪುರ, ದೊಡ್ಡೇರಿ, ಗಿರೇಗೊಂಡನಹಳ್ಳಿ, ರಂಟವಾಳಲು, ಬೆಲ್ಲದಮಡುಗು, ತಿಮ್ಮಲಾಪುರ, ಗಿಡದಾಗಲಹಳ್ಳಿ ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ಈ ಭಾಗದಲ್ಲಿ ವಿದ್ಯುತ್ ಆಭಾವ ಇರುವುದನ್ನು ಮನಗಂಡು 24 ಮೇಗಾ ವಾಟ್ ಪರಿವರ್ತಕವನ್ನು ಒಂದು ವಾರದಲ್ಲಿ ಅಳವಡಿಸಿ ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಿಸುವುದರ ಜತೆಗೆ ಕವಣದಾಲ ಗ್ರಾಮದಲ್ಲಿ ಕೆಲವೇ ದಿನದಲ್ಲಿ ಉಪವಿದ್ಯುತ್ ಸ್ಥಾವರದ ಕೆಲಸ ಪ್ರಾರಂಭಿಸಲಾಗುತ್ತದೆ. ಪುಲಮಗಟ್ಟದಲ್ಲಿ ವಿದ್ಯುತ್ ಉಪ ಕೇಂದ್ರವನ್ನು 2006ರಲ್ಲಿ ಪ್ರಾರಂಭಿಸಲಾಗಿದೆ ಎಂದರು.
ಆವಿನಮಡುಗು, ರಂಗಾಪುರ ಭಾಗದ ವಿದ್ಯಾರ್ಥಿಗಳು ಬಡವನಹಳ್ಳಿ ಮಧುಗಿರಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ವಾಹನಗಳ ಸೌಕರ್ಯ ವಿಲ್ಲದಿರುವುದರಿಂದ ನಮಗೆ ಬಸ್ಸಿನ ವ್ಯವಸ್ಥೆ ಮಾಡಿಸಿ ಕೊಡಬೇಕೆಂದು ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದಾಗ ಮಧುಗಿರಿಯ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ತಿಳಿಸಿ ತುರ್ತಾಗಿ ಬಸ್ಗಳನ್ನು ಬಿಡುವಂತೆ ಸಚಿವರು ಸೂಚಿಸಿದರು.
ಉಪಾದ್ಯಕ್ಷೆ ಜಯಮ್ಮ, ಜಿಪಂ ಮಾಜಿ ಸದಸ್ಯ ಚೌಡಪ್ಪ, ಡಿವೈಎಸ್ಪಿ ಮಂಜುನಾಥ, ಮುಖಂಡ ಒಬಿಸಿ ನಾಗರಾಜು, ರಂಗನಾಥ, ತಾಪಂ ಮಾಜಿ ಸದಸ್ಯ ನಜೀರ್ ಸಾಬ್, ಜಯರಾಮಯ್ಯ, ದೇವರಾಜು, ಹನುಮಂತರಾಯಪ್ಪ, ಪಿಡಿಒ ಗೌಡಪ್ಪ, ಲೆಕ್ಕ ಸಹಾಯಕ, ರಾಮಚಂದ್ರಪ್ಪ, ಮಂಜುಳಾ, ಬಿಲ್ ಕಲೇಕ್ಟರ್ ರಂಗಯ್ಯ ಇದ್ದರು.