

ನಾಪೋಕ್ಲು: ಮಕ್ಕಳಿಗೆ ಅರೆಭಾಷೆಯನ್ನು ಕಲಿಸುವುದ ಜತೆಗೆ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷೆ ಸಂಸ್ಕೃತಿ ಪಸರಿಸುವ ಕೆಲಸ ಮಾಡಬೇಕು ಎಂದು ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಸಲಹೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಅರೆಭಾಷೆ ಗಡಿನಾಡ ಉತ್ಸವದ ಕ್ರೀಡಾಕೂಟ ಸಮಾರಂಭದಲ್ಲಿ ಮಾತನಾಡಿದರು.
ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇದು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ, ಕೊಡಗಿನಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆದಿದೆ. ನಮ್ಮ ಮಕ್ಕಳಿಗೆ ಮಾತೃಭಾಷೆ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಕಲಿಸುವುದನ್ನು ಹಿರಿಯರು ಮರೆಯಬಾರದು ಎಂದರು.
ನಿವೃತ್ತ ಶಿಕ್ಷಕಿ ಮಂಞಂಡ್ರ ರೇಖಾ ಉಲ್ಲಾಸ್ ಮಾತನಾಡಿ, ಆಟದಲ್ಲಿ ಸಕಾರಾತ್ಮಕ ಭಾವನೆ ಇರಬೇಕು. ಕ್ರೀಡೆಗೆ ಸಂಬಂಧಿಸಿದಂತೆ ಸೋಲನ್ನು ಯಶಸ್ಸಿನ ಮೆಟ್ಟಿಲು ಎಂದು ಪರಿಗಣಿಸಬೇಕು. ಒಂದು ಭಾಷೆಯನ್ನು ಪ್ರೀತಿಸುವುದರೊಂದಿಗೆ ಇನ್ನೊಂದು ಭಾಷೆಯನ್ನೂ ಬಳಸಬೇಕು ಎಂದರು.
ಗಡಿನಾಡ ಉತ್ಸವದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್‌ಗೆ ಕಡಂಗ ಗಣಪತಿ ದೇವಸ್ಥಾನದ ಎದುರು ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಗಾಳಿಯಲ್ಲಿ ಗುಂಡು ಹಾರಿಸಿ, ಸದಾನಂದ ಮಾವಜಿ ಮಾವಜಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪುರುಷರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಓಟದಲ್ಲಿ ಭಾಗವಹಿಸಿದ್ದರು. ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾವಜಿ ದೀಪ ಬೆಳಗಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ, ಉತ್ಸವದ ಸಂಚಾಲಕ ವಿನೋದ್ ಮೂಡಗದ್ದೆ, ಚಂದ್ರಾವತಿ ಬಡ್ಡಡ್ಕ, ಅಕಾಡೆಮಿ ಸದಸ್ಯರಾದ ಪಿ. ಎಸ್.ಕಾರ್ಯಪ್ಪ, ಲತಾಪ್ರಸಾದ್ ಕುದ್ಪಾಜೆ, ಅಯ್ಯಪ್ಪ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ವಿವಿಧ ಕ್ರೀಡೆಗಳು ಮತ್ತು ಸ್ಪರ್ಧೆಗಳು ನಡೆದವು. ಈ ಸಂದರ್ಭ ಅಕಾಡೆಮಿ ವತಿಯಿಂದ ಪುಸ್ತಕ ಮಾರಾಟ ನಡೆಯಿತು.