

ಚಿಕ್ಕಬಳ್ಳಾಪುರ: ನಗರದ ಸಿವಿವಿ ಕ್ಯಾಂಪಸ್‌ನಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಮಣ್ಣಿನಲ್ಲಿ ಹೊಂಗೆ, ಹುಣಸೆ, ಗಸೆಗಸೆ, ಮಾವು ಬೀಜಗಳ ಮಿಶ್ರಣ ಮಾಡಿ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದರು.
ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಕೆ.ವಿ.ಆಂಗ್ಲಶಾಲೆ, ನ್ಯೂ ಹೊರೈಜಾನ್, ಪ್ರಶಾಂತಿ ಬಾಲಮಂದಿರ, ವಾಪಸಂದ್ರದ ಸರ್ಕಾರಿ ಪ್ರೌಢಶಾಲೆ ಸೇರಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜೇಡಿಮಣ್ಣು, ಕೆಂಮಣ್ಣಿನಿಂದ ಗಣಪನ ವಿವಿಧ ಕಲಾಕೃತಿಗಳನ್ನು ರಚಿಸಿದರು.
ಹೊಂಗೆ, ಹುಣಸೆ, ಗಸೆಗಸೆ, ಮಾವು ಸೇರಿ ವಿವಿಧ ಬೀಜಗಳನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ, ಮೂರ್ತಿಗಳನ್ನು ತಯಾರಿಸಲಾಗಿದೆ. ಹಬ್ಬದ ಬಳಿಕ ಶಾಲೆ ಮತ್ತು ಮನೆಯ ಖಾಲಿ ಪ್ರದೇಶಗಳಲ್ಲಿನ ಮಣ್ಣಿನ ಗುಂಡಿಯ ನಿಮ್ಮಜನ ಮಾಡಲಾಗುತ್ತದೆ. ಇದರಲ್ಲಿನ ಬೀಜ ಮೊಳಕೆಯೊಡೆದು ಬೆಳೆಯುತ್ತದೆ. ಇದು ಪರಿಸರಸ್ನೇಹಿ ಗಣೇಶನ ಹಬ್ಬದ ಆಚರಣೆ ಎಂದು ಸಿಆರ್‌ಪಿ ವಿ.ಶ್ರೀನಿವಾಸ್ ತಿಳಿಸಿದರು.
ಮಕ್ಕಳ ಕಲೆಗೆ ಮೆಚ್ಚುಗೆ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿ ಹಲವರು ಮಕ್ಕಳು ತಯಾರಿಸಿದ ಗಣಪನ ಮೂರ್ತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಪಾಲಿಸುತ್ತ ಹಬ್ಬವನ್ನು ಆಚರಿಸಬೇಕಾಗಿದೆ. ಇದರಲ್ಲಿ ಪರಿಸರಸ್ನೇಹಿ ಚಟುವಟಿಕೆಯ ಅನ್ವಯವು ಅರ್ಥಪೂರ್ಣವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಅರಣ್ಯ ವಲಯಾಧಿಕಾರಿ ಅರಸಲನ್, ಕೆ.ವಿ.ಶಿಕ್ಷಣ ದತ್ತಿಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮತ್ತಿತರರು ಇದ್ದರು.