

ಶಹಾಬಾದ್: ಒಂದಿಲ್ಲೊಂದು ಹೊಸತನವನ್ನು ಮಕ್ಕಳ ಮನದಲ್ಲಿ ಬಿತ್ತುವ ಮಾಡಿ ಹೊಸ ಕ್ರಿಯಾಶೀಲತೆಗೆ ಪ್ರೇರಣೆ ನೀಡುವ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ಗುರುವಾರ ಮಕ್ಕಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ನಿರ್ಮಾಣ ಸ್ಪರ್ಧೆ ನಡೆಯಿತು.
ಶ್ರೀ ಸಚ್ಚಿದಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಐ.ಬಡಿಗೇರ ಪರಿಸರ ಸ್ನೇಹಿ ಗಣೇಶ ನಿರ್ಮಾಣ ಸ್ಪರ್ಧೆಯಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಜನರಲ್ಲಿ ಹೋರಾಟದ ಕಿಚ್ಚು, ಏಕತೆ ಮೂಡಿಸಲು ಬಾಲಗಂಗಾಧರ ತಿಲಕ ಅವರು ಸಾರ್ವಜನಿಕ ಗಣೇಶ ಉತ್ಸವ ಪ್ರಾರಂಭಿಸಿದರು. ಅದರೆ, ಇಂದು ಪಿಒಪಿಯಿಂದ ತಯಾರಿಸಿದ, ರಾಸಾಯನಿಕ ಬಣ್ಣ ಬಳಸುವ ಗಣೇಶ ಮೂರ್ತಿ ಸ್ಥಾಪಿಸುವ ಮೂಲಕ ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತಿದೆ. ಗಣೇಶ ಉತ್ಸವ ನೆಪದಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯ ನಡೆಗಟ್ಟುವ ನಿಟ್ಟಿಲ್ಲಿ ಜನ ಜಾಗೃತಿ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ನೆರೆಹೊರೆಯವರಲ್ಲಿ ಜಾಗೃತಿ ಮೂಡಿಬೇಕು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉತ್ತಮ ಮೂರ್ತಿ ತಯಾರಿಸಿದ ಶರಣ (೭ನೇ ತರಗತಿ), ಕಿರಣ ಮಲ್ಲಪ್ಪ (೧೦ನೇ ತರಗತಿ), ಅನೀಲ ಮಹಾದೇವ (೧೦ನೇ ತರಗತಿ), ಮಲ್ಲಿಕಾಜುನ ಲಿಂಗಪ್ಪ (೯ನೇ ತರಗತಿ), ಶರಣಬಸ್ಸು ಸುಭಾಷ (೧೦ನೇ ತರಗತಿ) ಅವರಿಗೆ ಬಹುಮಾನ ನೀಡಲಾಯಿತು.
ಶಿಕ್ಷಕರಾದ ಈಶ್ವರ ಪಾಟೀಲ್, ಶಿವುಕುಮಾರ ಸರಡಗಿ, ಈರಣ್ಣ ಹಳ್ಳಿ, ಸಿದ್ದಲಿಂಗ ಬಾಳಿ, ರಾಜಶೇಖರ ಅಳ್ಳೊಳ್ಳಿ, ಸುಗುಣಾ ಕೊಳ್ಕೂರ, ವಿಜಯಲಕ್ಷ್ಮೀ, ಬಮನಳ್ಳಿ, ಭುವನೇಶ್ವರ ಎಂ. ಜ್ಯೋತಿ ತೆಗನೂರ, ಕುಮಾರಸ್ವಾಮಿ ಇತರರಿದ್ದರು.