ಮಕ್ಕಳಿಂದ ಪಾಲಕರ ಪಾದಪೂಜೆ

Foot worship of parents by children
ಮುದ್ದೇಬಿಹಾಳ ತಾಲೂಕಿನ ಚವನಬಾವಿ ಸರ್ಕಾರಿ ಮಾದರಿ ಶಾಲೆಯಲ್ಲಿ ಮಕ್ಕಳು ಪಾಲಕರ ಪಾದಪೂಜೆ ನೆರವೇರಿಸಿದರು.
Published on

ಮುದ್ದೇಬಿಹಾಳ: ತಾಲೂಕಿನ ಖಿಲಾರಹಟ್ಟಿ ಹಾಗೂ ಚವನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸರಸ್ವತಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಜತೆಗೆ ಜೀವಂತ ದೇವರಾಗಿರುವ ತಮ್ಮ ತಂದೆ ತಾಯಿಯರ ಪಾದಪೂಜೆಯನ್ನು ಮಕ್ಕಳಿಂದ ಮಾಡಿಸುವ ವಿಶಿಷ್ಟ ಕಾರ್ಯಕ್ರಮ ನಡೆಸಲಾಯಿತು.

ಮಕ್ಕಳು ಶಾಲೆಯ ಮೈದಾನದಲ್ಲಿ ತಮ್ಮ ತಂದೆ ತಾಯಿಗಳನ್ನು ಸಾಲಾಗಿ ಕೂರಿಸಿ, ತಮ್ಮ ಹೆತ್ತವರ ಪಾದಪೂಜೆ ಮಾಡಿದರು. ತಟ್ಟೆಯಲ್ಲಿ ಪಾಲಕರ ಪಾದಗಳನ್ನಿರಿಸಿ ತೊಳೆದು, ಹೂ ಮತ್ತು ಪತ್ರಿಯನ್ನು ಅರ್ಪಿಸಿ, ಕಾಯಿ ಕರ್ಪೂರ ಬೆಳಗಿ ಪೂಜೆ ಸಲ್ಲಿಸಿ ಬಳಿಕ ಸಾಷ್ಟಾಂಗ ನಮಸ್ಕಾರ ಹಾಕಿದರು.

ತಂದೆ ತಾಯಿಗಳ ಕಣ್ಣಲ್ಲಿ ಆನಂದಭಾಷ್ಪದ ಜತೆಗೆ ಸಣ್ಣಸಣ್ಣ ಮಕ್ಕಳಿಂದ ನಮ್ಮ ಪಾದ ಮುಟ್ಟಿಸಿಕೊಂಡೆವಲ್ಲ ಎಂಬ ಕಳವಳ ಒಂದೆಡೆಯಾದರೆ ತಮ್ಮೂರಿನ ಶಾಲೆಗಳಲ್ಲಿ ಸಂಸ್ಕಾರದ ಶಿಕ್ಷಣ ದೊರೆಯುತ್ತಿರುವುದಕ್ಕೆ ಸಂತಸಗೊಂಡರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿ.ಬಿ. ಮೂಲಿಮನಿ, ಮುಖ್ಯಗುರು ಸಿ.ಎಲ್. ಮಮದಾಪುರ, ಗ್ರಾಪಂ ಸದಸ್ಯರಾದ ನೀಲಪ್ಪ ಮದರಿ, ಕಾಶೆಪ್ಪ ಮಾದರ, ಶಂಕರಗೌಡ ಪಾಟೀಲ, ಗುರಣ್ಣ ಹಾದಿಮನಿ, ಎಸ್.ವೈ. ಗೂಡ್ಲಮನಿ ಇತರರಿದ್ದರು.

ಚವನಬಾವಿ ಶಾಲೆಯಲ್ಲಿ: ಚವನಬಾವಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ತಂದೆ ತಾಯಿಯರ ಪಾದಪೂಜೆ ಮಾಡಿಸುವ ವಿನೂತನ ಕಾರ್ಯಕ್ರಮ ನಡೆಯಿತು. ಮುಖಂಡ ಬಿ.ಎಸ್. ಬಪ್ಪರಗಿ, ಶಾಲೆ ಮುಖ್ಯಗುರು ಎಸ್.ಎಂ. ಜೋಗಿನ, ಗಣ್ಯರಾದ ಗೋವಿಂದಪ್ಪಗೌಡ ಪಾಟೀಲ, ದ್ಯಾಮಣ್ಣ ಸೋಮನಾಳ, ಗದ್ದಪ್ಪ ಪೂಜಾರಿ, ಹುಲಗಪ್ಪ ತಳವಾರ, ವೀರೇಶ ಚಲವಾದಿ, ಮಂಜುನಾಥ ಚಲವಾದಿ, ಡಿ.ಬಿ. ಮದರಿ, ಆರ್.ಎಚ್. ಹಾದಿಮನಿ, ಶಾಲೆ ಮಕ್ಕಳ ಪಾಲಕರು, ಚವನಭಾವಿ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net