

ಹೊಳೆನರಸೀಪುರ: ಗ್ಯಾರೇಜ್‌ಗಳು, ಅಂಗಡಿ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಕಾನೂನುಬಾಹಿರ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ನಿರೀಕ್ಷಕಿ ಕನಕಲಕ್ಷ್ಮೀ ಹೇಳಿದರು.
ಪಟ್ಟಣದಲ್ಲಿರುವ ಕೆಲ ಅಂಗಡಿ, ಹೋಟೆಲ್, ವರ್ಕ್‌ಷಾಪ್‌ಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಮೇಲೆ ಬುಧವಾರ ನಗರದಲ್ಲಿ ಹಲವೆಡೆ ದಾಳಿ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಲವೆಡೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇಂತಹ ವಿಷಯಗಳು ಕಂಡ ತಕ್ಷಣ ಕಾರ್ಮಿಕ, ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಅಧಿಕಾರಿ ಗೋಪಾಲ್ ಮಾತನಾಡಿ, ಮಕ್ಕಳನ್ನು ದೈಹಿಕ, ಮಾನಸಿಕ, ಆರ್ಥಿಕವಾಗಿ ಶೋಷಣೆಗೆ ಒಳಪಡಿಸುವುದು ಕಾನೂನು ಬಾಹಿರ. 14 ವರ್ಷದೊಳಗಿನ ಮಕ್ಕಳನ್ನು ಕಾರ್ಮಿಕರಾಗಿ ದುಡಿಸುವುದು ಸರಿಯಲ್ಲ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಇದೇ ವೇಳೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಯಿತು. ಅಲ್ಲದೆ, ಮೂವರು ವರ್ತಕರ ವಿರುದ್ಧ ನಗರ ಠಾಣೆಯಲ್ಲಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ತಹಸೀಲ್ದಾರ್ ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಅರಣ್ಯಾಧಿಕಾರಿ ಹೇಮಂತ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.