ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರೋತ್ಸಾಹಿಸಿ

ಕೆ.ಆರ್.ಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಜತೆ ಗಣ್ಯರು. ಶ್ರುತಿ ಶ್ರೀನಿವಾಸ, ರವಿಶಂಕರೇಗೌಡ, ಬಿ.ಎನ್.ಮಹೇಶ, ಜಯಂತಿ, ನಂಜುಂಡಾಚಾರಿ ಇತರರಿದ್ದರು.
30-08--krs3
Published on

ಕೆ.ಆರ್.ಸಾಗರ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಆರ್.ಸಾಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಕೆ.ಆರ್. ಸಾಗರ ಗ್ರಾಪಂ ಅಧ್ಯಕ್ಷೆ ಶ್ರುತಿ ಶ್ರೀನಿವಾಸ ಬುಧವಾರ ಚಾಲನೆ ನೀಡಿದರು.


ಪ್ರತಿಭಾ ಅನ್ವೇಷಣೆ ನಡೆಯುವ ಕಾರ್ಯಕ್ರಮಗಳಿಂದ ಗ್ರಾಮೀಣ ಮಟ್ಟದ ಪ್ರತಿಭೆಗಳು ಹೊರಬರಲು ಸಾಧ್ಯ. ಇದಕ್ಕೆ ಪಾಲಕರ ಸಹಕಾರ ಅತ್ಯಗತ್ಯ. ಕೇವಲ ಓದಿಗೆ ನಿಮ್ಮ ಮಕ್ಕಳನ್ನು ಸೀಮಿತಗೊಳಿಸದೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪ್ರೋತ್ಸಾಹ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ರವಿಶಂಕರೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಸಹಾಯ ಮಾಡಲು ನಾನು ಸದಾ ಸಿದ್ಧ. ಇಂದಿನ ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾ ಅನ್ವೇಷಣೆಗೆ ಉತ್ತಮ ವೇದಿಕೆ ಪ್ರತಿಭಾ ಕಾರಂಜಿ ಎಂದರು.


ಕನ್ನಡ, ಇಂಗ್ಲಿಷ್, ಹಿಂದಿ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ, ಆಶುಭಾಷಣ ಸ್ಪರ್ಧೆ, ಕ್ಲೆ ಮಾಡೆಲಿಂಗ್, ಮಿಮಿಕ್ರಿ, ಚಿತ್ರಕಲೆ ಸೇರಿದಂತೆ 15 ವಿಭಾಗಗಳಲ್ಲಿ ಕ್ಲಸ್ಟರ್ ಮಟ್ಟದ 16 ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.


ಗ್ರಾಪಂ ಸದಸ್ಯೆ ಜಯಂತಿ, ಸಿಆರ್‌ಪಿ ಬಿ.ಎನ್.ಮಹೇಶ್, ಶಿಕ್ಷಣ ಸಂಯೋಜಕ ನಂಜುಂಡಾಚಾರಿ, ಮುಖ್ಯಶಿಕ್ಷಕ ಸಿ.ಮಹೇಶ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net