ಮಕ್ಕಳಲ್ಲಿ ಸ್ಪರ್ಧೆಗೆ ಬೇಕಾದ ಜ್ಞಾನ ಬೆಳೆಸಿ

23BGV Manju5
ಚಿಕ್ಕೋಡಿ ತಾಲೂಕಿನ ಅಂಕಲಿ ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ಕೋರೆ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸ್ಕಿಲ್ ಇನ್ ವಿಲೇಜ್’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ಡಾ.ಪ್ರಭಾಕರ ಕೋರೆ, ಬಿ.ಎಚ್. ಅಂಬಿ, ಡಾ. ಎ.ಕೆ. ಪಾಟೀಲ, ಜಯಶ್ರೀ ತಮಗೊಂಡ, ಭಾರತಿ ಪಾಟೀಲ ಇತರರಿದ್ದರು.
Published on

ಬೆಳಗಾವಿ : ಶಿಕ್ಷಕರು ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸುವ ಮೂಲಕ ಅವರ ಬೌದ್ಧಿಕ ಜ್ಞಾನವನ್ನೂ ಹೆಚ್ಚಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಶ್ಯ ಗುಣಗಳನ್ನು ಪ್ರಾಥಮಿಕ ಹಂತದಿಂದಲೇ ಅವರಲ್ಲಿ ತುಂಬಬೇಕು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸಲಹೆ ನೀಡಿದ್ದಾರೆ.

ತಾಲೂಕಿನ ಅಂಕಲಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಎಸ್.ಸಿ. ಪಾಟೀಲ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ಕೋರೆ ಪ್ರೌಢಶಾಲೆಯಲ್ಲಿ ದೇಶಪಾಂಡೆ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಗುರುವಾರ ಆಯೋಜಿಸಲಾಗಿದ್ದ ‘ಸ್ಕಿಲ್ ಇನ್ ವಿಲೇಜ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಇಂದು ಅಂಕಗಳ ಮಾನದಂಡ ಹೆಚ್ಚಿಸುವ ಬದಲಾಗಿ ಬುದ್ಧಿಮತ್ತೆ ವೃದ್ಧಿಸುವ ಕೌಶಲ ಬೆಳೆಸಬೇಕಾಗಿದೆ.

ಈ ವಿಚಾರದಲ್ಲಿ ಭಾಷೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಚಟುವಟಿಕೆ ಆಯೋಜಿಸುವ ಮೂಲಕ ಮಕ್ಕಳಲ್ಲಿ ಮಾತೃ ಭಾಷೆಯೊಂದಿಗೆ ಇತರ ಭಾಷೆಗಳ ಬಗ್ಗೆ ಪ್ರಬುದ್ಧತೆ ಮೂಡುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಸ್ಕಿಲ್ ಇನ್ ವಿಲೇಜ್’ ತರಬೇತಿಯು ವಿದ್ಯಾರ್ಥಿಗಳಲ್ಲಿ ಕೀಳರಿಮೆ ಕಿತ್ತುಹಾಕಿ, ಕ್ರಿಯಾಶೀಲ ಮನೋಭಾವ ಮೂಡಿಸಲಿದೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನೂ ಕಲಿಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಡಾ. ಕೋರೆ ಕಿವಿಮಾತು ಹೇಳಿದರು.

ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯ ಬಿ.ಎಚ್. ಅಂಬಿ, ಪದವಿ ಕಾಲೇಜ್ ಪ್ರಾಚಾರ್ಯ ಡಾ.ಎ.ಕೆ.ಪಾಟೀಲ, ಪಿಯು ಪ್ರಾಚಾರ್ಯ ಆರ್.ಸಿ. ಪಾಟೀಲ, ಪ್ರೌಢಶಾಲೆಯ ಮುಖ್ಯಸ್ಥೆ ಜಯಶ್ರೀ ತಮಗೊಂಡ, ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯೆ ಭಾರತಿ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net