ಮಕ್ಕಳಲ್ಲಿ ಸಕಾರಾತ್ಮಕ ಉತ್ಸಾಹ ಅಗತ್ಯ

1
Published on

ಮೈಸೂರು: ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗಿದೆ. ಪಠ್ಯಪುಸ್ತಕಾದಾಚೆಗೂ ಜೀವನ ಇದೆ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜನಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 8ನೇ ಶಾಲಾ ವಾರ್ಷಿಕ ಸಂಗೀತ ಸಿರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುಗಳು ಮಾಡುವ ಪಾಠ-ಪ್ರವಚನ ಕೇಳುವ ಜತೆಗೆ, ಪ್ರಶ್ನಿಸುವ ಮನೋಭಾವ ಕೂಡ ಇರಬೇಕು ಎಂದರು.

ಮನಸ್ಸನ್ನು ಸಂತೋಷಪಡಿಸುವುದು ಸಂಗೀತದಿಂದ ಸಾಧ್ಯ. ಶಿಕ್ಷಣದ ಜತೆಗೆ ಸಂಗೀತ ಆಲಿಸುವ ಆಸಕ್ತಿ ಇದ್ದರೆ ಅಥವಾ ಕಲಿತರೆ ವ್ಯಕ್ತಿತ್ವ ಅರ್ಥಪೂರ್ಣವಾಗುತ್ತದೆ. ಮಕ್ಕಳಲ್ಲಿ ಜೀವನ ಪೂರ್ಣ ಕುತೂಹಲ ಇರಬೇಕು. ಗೊತ್ತಿಲ್ಲದ್ದನ್ನು ಕೇಳಿ ತಿಳಿಯುವ ಆಸಕ್ತಿ ಇರಬೇಕು. ಆ ಮೂಲಕ ಅನುಮಾನ ನಿವಾರಿಸಿಕೊಳ್ಳಬೇಕು. ಸರಿ- ತಪ್ಪುಗಳ ಬಗ್ಗೆ ವಿವೇಚನ ಮಾಡಬೇಕು. ಸಕಾರಾತ್ಮಕ ಉತ್ಸಾಹ ಇರಬೇಕು ಎಂದರು.

ಉಪ ಪ್ರಾಂಶುಪಾಲ ಬಿ.ಸೋಮಶೇಖರ್, ಪ್ರಾಂಶುಪಾಲೆ ನಾಗಮ್ಮ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಂಗೀತ ವಿಷಯ ಪರವೀಕ್ಷಕ ಕೆಂಪರಾಜು, ವಿದುಷಿ ಡಾ.ಎನ್. ಮಂಜುಳಾ, ಸಂಗೀತ ಶಿಕ್ಷಕ ಎಂ.ಬಿ. ನಾಗರಾಜು ಇದ್ದರು.
ಕ್ರೀಡಾ ಸಾಧಕ ವಿದ್ಯಾರ್ಥಿಗಳು, ಸಂಗೀತ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಗಾಯನ ಗೋಷ್ಠಿ, ಡಾ.ಎನ್. ಮಂಜುಳಾ ಅವರಿಂದ ಲಘು ಸಂಗೀತ ನಡೆಯಿತು. ಪಕ್ಕಪಾದ್ಯದಲ್ಲಿ ಚಿಕ್ಕಣ್ಣಾಚಾರ್- ಪಿಟೀಲು, ಕುಮಾರ್- ಮೃದಂಗ, ನಿಂಗೇಗೌಡ- ಕೀ ಬೋರ್ಡ್ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net