

ಹುಮನಾಬಾದ್: ಎಲ್ಲ ಪಾಲಕರು ಮಕ್ಕಳಲ್ಲಿ ಧರ್ಮ ಸಂಸ್ಕಾರ ಹಾಗೂ ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಬೇಕೆಂದು ನವದೆಹಲಿ ಆರ್ಯ ಪ್ರತಿನಿಧಿ ಸಭಾ ಮಂತ್ರಿ ವಿನಯ ಆರ್ಯ ಕರೆ ನೀಡಿದರು.
ಪಟ್ಟಣದ ರಾಜರಾಜೇಶ್ವರಿ ದೇವಸ್ಥಾನ ಆವರಣದಲ್ಲಿ ಭಾನುವಾರ ತಾಲೂಕು ಆರ್ಯ ಸಮಾಜ ಹಾಗೂ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹಯೋಗದಲ್ಲಿ ಶ್ರೀ ದಯಾನಂದ ಸರಸ್ವತಿಗಳ ದ್ವಿಶತಮಾನೋತ್ಸವ ನಿಮಿತ್ತ ೫೦ ಕುಂಡಗಳೊಂದಿಗೆ ೨೦೦ ಕುಟುಂಬಸ್ಥರಿಂದ ಮಾನವ ಕಲ್ಯಾಣಕ್ಕಾಗಿ ಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕೆ ಹಾಗೂ ಸಮಾಜಕ್ಕೆ ದಯಾನಂದ ಸರಸ್ವತಿಯವರ ಕೊಡುಗೆ ಅಪಾರ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ. ಸಂಸ್ಕೃತಿ ಉಳಿಯಬೇಕಾದರೆ ಮದುವೆಯಾಗಿ ಮೋಜು ಮಸ್ತಿ ಮಾಡದೇ ಹೆಚ್ಚು ಹೆಚ್ಚು ಸಂತಾನ ಪ್ರಾಪ್ತಿಯಾದರೆ ಮಾತ್ರ ದೇಶ, ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯ. ಜತೆಗೆ ನಾವು ಎಷ್ಟೇ ಹಣ, ಬಂಗಾರ, ಆಸ್ತಿ ಗಳಿಸಿದರೂ ಸಹ ಪ್ರತಿನಿತ್ಯ ತಂದೆ-ತಾಯಿ, ಮಕ್ಕಳೊಂದಿಗೆ ಕೆಲ ಸಮಯ ಕಳೆದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.
ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿದ್ದು, ಕೊನೆ ಗಳಿಗೆಯಲ್ಲಿ ಗುಜರಾತ್ ರಾಜ್ಯಪಾಲರು ಸಹ ಭಾಗವಹಿಸುವುದು ನಿಶ್ಚಿತವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅನಾರೋಗ್ಯದಿಂದ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭು ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಜೀವನ ಪರಿಯಂತ ಬ್ರಹ್ಮ, ಪಿತ್ರ, ದೈವ, ಮನುಷ್ಯ, ಭೂತ ಈ ಪಂಚ ಮಹಾಯಜ್ಞಗಳನ್ನು ಪ್ರತಿ ಕುಟುಂಬದವರು ನಿತ್ಯ ಮಾಡಲೇಬೇಕಾದ ಕರ್ಮ. ಬ್ರಹ್ಮ ಅಂದರೆ ಗ್ರಂಥಗಳ ಅಧ್ಯಾನ, ಪಿತೃಯಜ್ಞ ತಂದೆ ತಾಯಿ ಸೇವೆ, ದಾನ ಇತ್ಯಾದಿ, ದೈವಯಜ್ಞ ನದಿ, ಪರ್ವತ, ಗಿಡಗಳು ಸೇರಿ ಪ್ರಕೃತಿಯ ಪೂಜೆ, ಮನುಷ್ಯಜ್ಞ ನಮ್ಮ ಕರ್ತವ್ಯ ನಮ್ಮ ಸುತ್ತಮುತ್ತ ಯಾರೂ ಉಪವಾಸ ಇರದ ಹಾಗೆ ನೋಡಿಕೊಳ್ಳಬೇಕು. ಭೂತ ಅಂದರೆ ಮನೆಯ ಸುತ್ತಲು ಇರುವ ಪ್ರಾಣಿಗಳ ಸೇವೆ. ಇವು ಐದು ನಿತ್ಯ ಕರ್ಮಗಳು ಆಚರಿಸಿಲ್ಪಡುವುದಿಲ್ಲವೋ ಅವರು ಬದುಕಿದ್ದರೂ ವ್ಯರ್ಥ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಇವತ್ತು ನಮ್ಮ ಸಂಸ್ಕೃತಿ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಹಾನಿ ಉಂಟು ಮಾಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜನರಿಗೆ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹೈದರಾಬಾದ್‌ನ ಸವಿತಾ ಬೇಹನಜೀ ಯಜ್ಞ ಹಾಗೂ ಭಜನೆ ನಡೆಸಿಕೊಟ್ಟರು. ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಗೌರವ ಅಧ್ಯಕ್ಷ ಸುಭಾಷ ಅಷ್ಟೀಕರ, ಹಿಂದುತ್ವವಾದಿ ಈಶ್ವರ ಸಿಂಗ್ ಠಾಕೂರ್, ಸ್ಥಳೀಯ ಆರ್ಯ ಸಮಾಜ ಪ್ರಧಾನ ನಾರಾಯಣ ಚಿದ್ರಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಪ್ರಮುಖರಾದ ಅಕ್ಷಯ ಪಾಟೀಲ್, ರೇವಣಸಿದ್ದಪ್ಪ ಪಾಟೀಲ್, ಶಿವಶರಣಪ್ಪ ವಾಲಿ, ಧನರಾಜ ತಾಳಂಪಳ್ಳಿ, ದಯಾನಂದ ಅಷ್ಟೀಕರ, ತೆಲಾಂಗಣ ಆರ್ಯ ಸಮಾಜನ ಧರ್ಮರಾಜ ತೇಜಾ, ಪುರಸಭೆ ಅಧ್ಯಕ್ಷ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕರಂ ಜಾ, ಚೇತನರಾಜಪ್ರಭು, ಹಾವಗೇಪ್ಪ ಪಾಟೀಲ್, ಗಣೇಶ ಪಾಟೀಲ್ ಇತರರಿದ್ದರು.
ಕಾರ್ಯಕ್ರಮಕ್ಕೆ ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡರ ಮಾರ್ಗದರ್ಶನದಲ್ಲಿ ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ೧೪ ಪಿಎಸ್‌ಐ, ೨೯ ಎಎಸ್‌ಐ, ೧೨೦ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ಹುಮನಾಬಾದ್ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನ ರಾಜರಾಮಚಂದ್ರ ಅವರಿಂದ ೧೭೨೫ರಲ್ಲಿ ಸ್ಥಾಪನೆಗೊಂಡಿದ್ದು, ಜನವರಿ ೧೪ಕ್ಕೆ ೩೦೦ ವರ್ಷಗಳಾಗುತ್ತಿವೆ. ಎಲ್ಲರೂ ಸೇರಿ ವರ್ಷಚಾರಣೆ ಸಂಭ್ರಮ ಆಚರಿಸಿಸೋಣ. ಮಾಣಿಕನಗರ ಸಂಸ್ಥಾನದಿಂದ ಮಕರ ಸಂಕ್ರಮಣ (ಜ.೧೪)ದಂದು ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಜತೆಗೆ ಇದರ ಮೂಲ ದಾಖಲೆಗಳು ಸಂಸ್ಥಾನದಲ್ಲಿ ಲಭ್ಯವಿದೆ.
| ಶ್ರೀ ಡಾ.ಜ್ಞಾನರಾಜ ಪ್ರಭು ಮಾಣಿಕನಗರ
ಇಲ್ಲಿನ ಆರ್ಯ ಸಮಾಜ ಹಾಗೂ ಪತ್ನಿ ಪ್ರೇಮಾ ಪಾಟೀಲ್ ಸಂಕಲ್ಪದಂತೆ ದಯಾನಂದ ಸರಸ್ವತಿಯವರ ದ್ವಿಶತಮಾನೋತ್ಸವ ನಿಮಿತ್ತ ೨೦೦ಕುಟುಂಬಗಳಿಂದ ಯಜ್ಞಹವನದ ಧರ್ಮ ಹಾಗೂ ಸಮಾಜ ಮುಖಿ ಕಾರ್ಯಕ್ಕೆ ನಾನು ಹಾಗೂ ಸಹೋದರರು ಪಕ್ಷಾತೀತವಾಗಿ ಸಹಯೋಗ ನೀಡಿದ್ದು, ಆರ್ಯ ಸಮಾಜ ಹಾಗೂ ಭಕ್ತರು ಸಾಥ್ ನೀಡಿದ್ದರಿಂದ ಯಶಸ್ವಿಗೊಂಡಿದೆ. ಶ್ರೀ ಪ್ರಭುಗಳು ಹೇಳಿದಂತೆ ಹುಮನಾಬಾದ್ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸ್ಥಾಪನೆಯ ಮೂನ್ನೂರು ವರ್ಷಾಚರಣೆ ಮಕರ ಸಂಕ್ರಮಣದಂದು ಹುಮನಾಬಾದ್ ಉತ್ಸವವಾಗಿ ಆಚರಿಸೋಣ.
| ರಾಜಶೇಖರ ಪಾಟೀಲ್ ಮಾಜಿ ಸಚಿವ ಹುಮನಾಬಾದ್