ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಜಾಗೃತಗೊಳಿಸಿ

CTD 29 PAVADA-0002
Published on

ಚಿತ್ರದುರ್ಗ: ವೈಜ್ಞಾನಿಕ, ಚಿಂತನೆಗಳ ಮೂಲಕ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಬೇಕಿದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಪವಾಡಗಳ ಗುಟ್ಟು ಬಯಲು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮತ್ತು ನಂಬಿಕೆ ಎನ್ನುವ ಸವಾಲುಗಳು ನಮ್ಮ ಮುಂದಿವೆ ಎಂದರು.
ಪವಾಡ ಎನ್ನುವುದೇ ಒಂದು ಸುಳ್ಳು. ವಿಜ್ಞಾನ ಮಾರ್ಗದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು. ಶಿಕ್ಷಕರು ವೈಚಾರಿಕ ಪ್ರಜ್ಞೆ ಮೂಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಫೌಂಡೇಷನ್ ಕಾರ‌್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಮಾತನಾಡಿ, ಮೌಢ್ಯ ತೊಲಗಿಸಲು ವಿಜ್ಞಾನದಿಂದ ಮಾತ್ರ ಸಾಧ್ಯ ಎಂದರು.
ಉಪಾಧ್ಯಕ್ಷ ಚಳ್ಳಕೆರೆ ಯರ‌್ರಿಸ್ವಾಮಿ ಮಾತನಾಡಿ, ಪವಾಡವೆಂದರೆ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದದ್ದು. ವಿಜ್ಞಾನವನ್ನು ಸರಿಯಾಗಿ ತಿಳಿದರೆ ಮೂಢನಂಬಿಕೆಗಳನ್ನು ಪ್ರಶ್ನಿಸಬಹುದು ಎಂದು ಹೇಳಿದರು.
ಹಿರಿಯೂರಿನ ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಚ್.ಮಂಜುನಾಥ್ ಉಪನ್ಯಾಸ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯೆ ಎಂ.ಆರ್.ಜಯಲಕ್ಷ್ಮೀ, ಫೌಂಡೇಷನ್ ಖಜಾಂಚಿ ನಾಗಲಿಂಗರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net