ಮಕ್ಕಳಲ್ಲಿ ವಿವೇಕ, ವಿನಯ ಇರಬೇಕು

10spt1
Published on

ಸೋಮವಾರಪೇಟೆ: ಮಕ್ಕಳಿಗೆ ವಿದ್ಯೆಯೊಂದಿಗೆ ವಿವೇಕ, ವಿನಯ ಇದ್ದರೆ ಶೈಕ್ಷಣಿಕವಾಗಿ ಎತ್ತರಕ್ಕೆ ಬೆಳೆಯಬಹುದು ಎಂದು ಆದಿಚುಂಚನಗಿರಿ ಎಜುಕೇಷನ್ ಟ್ರಸ್ಟ್‌ನ ಹಾಸನ, ಕೊಡಗು ವಿಭಾಗದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವ ಬಹುದೊಡ್ಡ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ ಎಂದು ಹೇಳಿದರು. ವಿಜ್ಞಾನ ಮಕ್ಕಳ ಕಲಿಕೆಗೆ ಪೂರಕವಾಗಿರುಬೇಕು. ಮಕ್ಕಳನ್ನು ಅನ್ವೇಷಣೆ ಕಡೆಗೆ ಕರೆದೊಯ್ಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೇರುಗಳಲೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣೇಗೌಡ ಮಾತನಾಡಿ, ವಿಜ್ಞಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಜತೆಯಲ್ಲೇ ತಂತ್ರಜ್ಞಾನ ಮುಂದುವರಿದಿದೆ. ಪ್ರಾರಂಭದಲ್ಲೇ ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆದರೆ, ಮುಂದೆ ಭಾರತದ ಪ್ರಗತಿಯ ಸಾರಥಿ ಆಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉತ್ತಮ ವಿಜ್ಞಾನ ಪ್ರಶಸ್ತಿ ಪುರಸ್ಕೃತ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಇಬ್ರಾಹಿಂ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಗೌಡಳ್ಳಿ ಪ್ರೌಢಶಾಲೆಯ ಗಣಿತ ಶಿಕ್ಷಕ ದಿನೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಮಾದರಿಗಳು ಗಮನ ಸೆಳೆದವು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಮಲ್ಲೇಡಿಶಪ್ಪ, ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಪೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಸಿ.ಆರ್.ಪಿ.ದೇವರಾಜೇಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಎಚ್.ಆರ್.ಮುತ್ತಣ್ಣ, ಎಚ್.ಆರ್.ಸುರೇಶ್, ಜಿ.ಎಂ.ಹೂವಯ್ಯ, ಪುಟ್ಟಸ್ವಾಮಿ, ವೀರಭದ್ರಪ್ಪ ಹಾಗು ಮುಖ್ಯಶಿಕ್ಷಕಿ ರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net