

ಸಿರಗುಪ್ಪ: ಶಾಲಾ ಹಂತದಿಂದಲೇ ರಂಗಭೂಮಿ ಪರಿಚಯಿಸುವುದರಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ಸಾಧ್ಯ ಎಂದು ರಂಗ ಸಂಶೋಧಕ ಆರ್.ಪಿ.ಮಂಜುನಾಥ್ ಹೇಳಿದರು.
ಭೈರಗಾಮದಿನ್ನೆ ಗ್ರಾಮದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆಯಿಂದ ಆಯೋಜಿಸಿದ್ದ ವರ್ಷದ ಹರ್ಷ ರಂಗಬೆಸುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇತ್ತೀಚಿಗೆ ಮಾತನಾಡಿದರು. ಅಭಿನಯದಲ್ಲಿ ಬದ್ಧತೆ ಮತ್ತು ಕಲಾರಸಿಕತೆ ಇದ್ದರೆ ಅರೆಕ್ಷಣದಲ್ಲಿ ವೇದಿಕೆ ಸಿದ್ಧಗೊಂಡು ಹಬ್ಬದ ರಂಗು ಕಳೆ ಕಟ್ಟುತ್ತದೆ ಎಂದರು.
ಮಕ್ಕಳಲ್ಲಿ ಶೈಕ್ಷಣಿಕ ಪ್ರಜ್ಞೆಯೊಂದಿಗೆ ರಂಗ ಪ್ರಜ್ಞೆ ಬಿತ್ತುವ ಕೆಲಸ ನಡೆಯಬೇಕಿದೆ. ಮನೋಬಲ ಮತ್ತು ಬುದ್ಧಿಬಲವನ್ನು ಸಮರ್ಥವಾಗಿ ಉಳಿಸಿ ಬೆಳೆಸಬಲ್ಲ ಏಕೈಕ ಮಾರ್ಗ ರಂಗಭೂಮಿಯಾಗಿದೆ. ಹಾಗಾಗಿ ರಾಜ್ಯದ ಪ್ರತಿ ಶಾಲೆಯಲ್ಲೂ ರಂಗಶಿಕ್ಷಕರನ್ನು ನೇಮಿಸುವ ಕೆಲಸ ಸರ್ಕಾರದ ವತಿಯಿಂದ ಆಗಬೇಕಾಗಿದೆ. ಈ ಮೂಲಕ ಎಲ್ಲರಲ್ಲಿ ರಂಗಭೂಮಿ ಬಗೆಗಿನ ಆಸಕ್ತಿ, ಅಭಿರುಚಿ ಮೂಡಿಸುವ ಕೆಲಸವಾಗಬೇಕು ಎಂದರು.
ವಿದ್ಯಾರ್ಥಿಗಳು ಆರ್.ಪಿ.ಈಶಪ್ಪ ನಿರ್ದೇಶನದ ‘ವೀರ ಅಭಿಮನ್ಯು’ ಪ್ರದರ್ಶಿಸಿದರು. ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಎಚ್.ಕೆ.ನರಸನಗೌಡ, ರಂಗ ನಿರ್ದೇಶಕ ಆರ್.ಪಿ.ಈಶಪ್ಪ, ಅತಿಥಿ ಶಿಕ್ಷಕರಾದ ಎನ್.ದೇವಿರಮ್ಮ, ಕೆ.ಪುರುಷೋತ್ತಮ, ಕಲಾವಿದರಾದ ಆರ್.ವೀರನಗೌಡ, ಎಚ್.ಕೆ.ಶರಣಬಸವ ಇದ್ದರು.