

ಬಸವಕಲ್ಯಾಣ: ನಡೆ-ನುಡಿ ಒಂದಾಗಿಸಿಕೊಂಡ ಶರಣರ ಆದರ್ಶ ಬದುಕು ಹಾಗೂ ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸುವ ಜತೆಗೆ ಮಕ್ಕಳಿಗೆ ತಿಳಿಸಲು ಪ್ರಯತ್ನಿಸಬೇಕು. ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ನಿವೃತ್ತ ಶಿಕ್ಷಕ ಶ್ರೀಶೈಲ ಹುಡೇದ ಹೇಳಿದರು.
ತಾಲೂಕ ಶರಣ ಸಾಹಿತ್ಯ ಪರಿಷತ್‌ನಿಂದ ನಗರದ ಜ್ಞಾನಪ್ರಿಯಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕ ಸುತ್ತೂರು ಜಗದ್ಗುರು ಶ್ರೀ ಡಾ.ರಾಜೇಂದ್ರ ಸ್ವಾಮೀಜಿ ಜಯಂತಿ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಮಕ್ಕಳು ವಚನ ಸಾಹಿತ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವಚನ ಕಂಠಪಾಠ ಮಾಡಬೇಕು. ಯಾರು ಹೆಚ್ಚು ಹೆಚ್ಚು ವಚನ ಕಂಠ ಪಾಠ ಮಾಡಿ ಹೇಳುತ್ತಾರೆ. ಅಂತವರಿಗೆ ಬಿಕೆಡಿಬಿಯಿಂದ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಪ್ರೊ.ಜಿ.ಎಸ್.ಕರ್ಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳ ಮಾಹಿತಿ ನೀಡಿ, ಶೈಕ್ಷಣಿಕ ಪ್ರಗತಿಗೆ ಹಾಗೂ ಬಡವರ, ನಿರ್ಗತಿಕರ ಅಭ್ಯುದಯಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಡಾ.ರಾಜೇಂದ್ರ ಸ್ವಾಮೀಜಿಗಳ ಕೊಡುಗೆ ಅನನ್ಯ ಎಂದರು.
೨೫ ವರ್ಷ ಬಸವ ಪುರಾಣ ಹೇಳುತ್ತಿರುವ, ಯೋಗ ಸಾಧಕ ಪ್ರಭುಶೆಟ್ಟೆಪ್ಪ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ನಾಗಪ್ಪ ನಿಣ್ಣೆ ವಂದಿಸಿದರು. ಪತ್ರಕರ್ತ ಕಲ್ಯಾಣರಾವ ಮದರಗಾಂವಕರ್ ನಿರೂಪಣೆ ಮಾಡಿದರು.
ಪರಿಷತ್ ಸಂಸ್ಥಾಪನಾ ದಿನದ ನಿಮಿತ್ತ ಪ್ರತಿ ವರ್ಷ ನಡೆವ ಲಿಂ.ಕಾಶೆಮ್ಮ ಮತ್ತು ರಾಮಲಿಂಗಯ್ಯಾ ಸ್ವಾಮಿ ದತ್ತಿ ಉಪನ್ಯಾಸಕ್ಕೆ ಡಾ.ಮಹಾದೇವ ಸ್ವಾಮಿ ದತ್ತಿ ದಾಸೋಹಿಗಳಾಗಿದ್ದಾರೆ. ಜ್ಞಾನಪ್ರೀಯ ಶಾಲೆಯಲ್ಲಿ ಇತ್ತೀಚೆಗೆ ನಡೆಸಿದ ಶಾಲಾಮಟ್ಟದ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಕಾವ್ಯ ಜಿ., ಕೃತಿ ಮದರಗಾಂವಕರ್, ಸಾಯಿ ಎಸ್. ಅವರನ್ನು ಸನ್ಮಾನಿಸಿದರು.
ಅಕ್ಕಮಹಾದೇವಿ ಗವಿ ಮಠದ ಪೂಜ್ಯ ಸತ್ಯಕ್ಕ ತಾಯಿ ಆಶೀರ್ವಚನ ನೀಡಿದರು. ಪತ್ರಕರ್ತ ವೀರಶೆಟ್ಟಿ ಮಲಶೆಟ್ಟಿ ಮಾತನಾಡಿದರು. ಮುಖಂಡ ಮಾರುತಿ ಫುಲೆ, ಶಂಕರ, ಕಲ್ಪನಾ ಇತರರಿದ್ದರು.