ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ಪಾಲಕರಿಗೆ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಸಲಹೆ

26CBP5aMUST
Published on

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹುಟ್ಟೂರು ತಾಲೂಕಿನ ಪೆರೇಸಂದ್ರದಲ್ಲಿ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕರಗದ ಪೂಜಾರಿ ಆಂಧ್ರದ ಕುಪ್ಪಂನ ಬಾಲಾಜಿ ಕರಗವನ್ನು ಹೊತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಇದೇ ವೇಳೆ ನೆರೆದಿದ್ದ ನೂರಾರು ಮಂದಿ ಭಕ್ತರು ಘೋಷಣೆ ಕೂಗುವುದರೊಂದಿಗೆ ಕರಗದ ನೃತ್ಯ ವೀಕ್ಷಿಸಿ ಖುಷಿಪಟ್ಟರು.

ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಕರಗವನ್ನು ತಮಟೆ ವಾದಕರು ಮತ್ತು ಕತ್ತಿಗಳನ್ನು ಹಿಡಿದಿದ್ದ ವೀರಕುಮಾರರು ಅನುಸರಿಸಿದರು. ಕರಗ ಬರುವ ವಿಷಯ ತಿಳಿದು ಹಲವರು ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ ಕರಗಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ವಿವಿಧ ಸಂಘಟನೆಗಳಿಂದ ಅನ್ನ ಸಂತರ್ಪಣೆ ಕೈಗೊಳ್ಳಲಾಗಿತ್ತು.

ನಿರಂತರ ಸೇವಾ ಕಾರ್ಯ ಅಗತ್ಯ: ಉತ್ತಮ ಮಾರ್ಗದರ್ಶಿ ಆಧ್ಯಾತ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿದರು.

ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಮಾನವೀಯ ಮೌಲ್ಯ, ಸೇವಾ ಮನೋಭಾವನೆಯನ್ನು ಬೆಳೆಸುವುದರೊಂದಿಗೆ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ಈಶ್ವರ್ ಮಾತನಾಡಿ, ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯು ಕೃಷಿ, ಶೈಕ್ಷಣಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯ ಸಚಿವರ ಕಾಳಜಿಯಿಂದ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ಹಲವು ವರ್ಷಗಳ ಜನರ ಕನಸು ಈಡೇರಿದೆ ಎಂದರು.

ಗ್ರಾಪಂ ಅಧ್ಯಕ್ಷ ಪಿ.ಎನ್.ಚನ್ನಕೃಷ್ಣರೆಡ್ಡಿ, ಮಾಜಿ ಅಧ್ಯಕ್ಷ ಪಿ.ಎನ್.ರವಿಕೃಷ್ಣಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಗೋವಿಂದಸ್ವಾಮಿ, ಮುಖಂಡ ಮನೋಹರ್ ಮತ್ತಿತರರು ಇದ್ದರು.

ಪ್ರದೀಪ್‌ಗೆ ಸಚಿವರ ಗುಣಗಾನ: ಕಾರ್ಯಕ್ರಮದಲ್ಲಿ ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ಈಶ್ವರ್ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಗುಣಗಾನ ಮಾಡಿದರು. ಪೆರೇಸಂದ್ರದಲ್ಲಿ ಹುಟ್ಟಿ ಬೆಳೆದ ಪ್ರದೀಪ್ ಈಶ್ವರ್ ಒಳ್ಳೆಯ ಪ್ರತಿಭಾನ್ವಿತ ವ್ಯಕ್ತಿ. ಬಹಳಷ್ಟು ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ರೂಪಿಸುವಲ್ಲಿ ಶ್ರಮಿಸುತ್ತಿದ್ದು, ಬಡ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರೋತ್ಸಾಹಿಸಿದ್ದಾರೆ. ಇಂತಹ ಒಳ್ಳೆಯ ಶಿಕ್ಷಕ ತನಗೆ ಓದುವ ಸಂದರ್ಭದಲ್ಲಿ ಸಿಕ್ಕಿದ್ದರೆ ಮತ್ತಷ್ಟು ಪ್ರೋತ್ಸಾಹದಾಯಕ ಮಾರ್ಗದರ್ಶನ ಸಿಗುತ್ತಿತ್ತು ಎಂದು ತಿಳಿಸಿದರು.

ಉಕ್ರೇನ್ ವಿದ್ಯಾರ್ಥಿಗಳಿಗೆ ನೆರವು: ಯುದ್ಧಪೀಡಿತ ಯೂಕ್ರೇನ್‌ನಿಂದ ಭಾರತಕ್ಕೆ ವಾಪಸ್ಸಾಗಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವಿಚಾರವಾಗಿ ಶೀಘ್ರದಲ್ಲಿಯೇ ಶುಭ ವಿಚಾರ ಹೊರ ಬೀಳಲಿದೆ ಎಂದು ಸಚಿವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಉಕ್ರೇನ್‌ನಿಂದ ಬಂದ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ನಿರ್ದೇಶನ ಸಿಗುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳ ಹಿತವನ್ನು ಕಾಪಾಡಲು ಬದ್ಧ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net