ಮಕ್ಕಳಲ್ಲಿ ಮಾನವೀಯ ಮೌಲ್ಯ ಗುಣ ಹೆಚ್ಚಲಿ

srimangala 1
ಹುದಿಕೇರಿ ಲಿಟಲ್ ಫ್ಲವರ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ ಬಯವಂಡ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಕಿರಿಯಮಾಡ ರಾಜ್ ಕುಶಾಲಪ್ಪ, ಸಾಲ್ಡನ್, ನಾಗೇಶ್, ಕೊಡಂಗಡ ವಾಸು ಬಿದ್ದಪ್ಪ, ಆಶಾ ಜ್ಯೋತಿ, ಕೆ.ಎಲ್.ರಶ್ಮಿ, ಕೆ.ದಮಯಂತಿ, ಪಾರ್ವತಿ ಇದ್ದರು.
Published on

ಶ್ರೀಮಂಗಲ; ಮಕ್ಕಳಿಗೆ ಶಿಕ್ಷಣ ಕೊಡಿಸುವುದರೊಂದಿಗೆ ಮಾನವೀಯ ಮೌಲ್ಯ ಗುಣವನ್ನು ಬೆಳೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪಾಲಕರು ಸಹಕರಿಸಬೇಕಿದೆ ಎಂದು ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಹೇಳಿದರು.

ಹುದಿಕೇರಿ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಾನವೀಯ ಮೌಲ್ಯ ಸಮಾಜದಲ್ಲಿ ಕುಂಠಿತವಾಗುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಸಾಕಷ್ಟು ಆಘಾತಕಾರಿ ಚಟುವಟಿಕೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗಿದೆ ಎಂದು ಹೇಳಿದರು.
ಪಾಲಕರು ಆಗಾಗ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಕ್ಕಳ ಗುಣ, ನಡತೆ, ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆಯಬೇಕು. ಶಾಲಾ ಹೊರಗಡೆಯೂ ಮಕ್ಕಳ ನಡತೆಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ದಾರಿ ತಪ್ಪುತ್ತಿದ್ದರೆ ಅದನ್ನು ಸರಿಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಸಹಾಯಕ ಉಪ ನಿರೀಕ್ಷಕ ಸಲ್ಡಾನ್ ಮಾತನಾಡಿ, ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣದ ಅವಶ್ಯಕತೆ ಇದ್ದು ಶಿಕ್ಷಣದಿಂದ ಉನ್ನತಿ ಸಾಧ್ಯ. ಈ ನಿಟ್ಟಿನಲ್ಲಿ ಲಿಟಲ್ ಫ್ಲವರ್ ಶಾಲೆ ಗ್ರಾಮೀಣ ಭಾಗದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರಿನ ಪ್ರಗತಿ ವಿದ್ಯಾಸಂಸ್ಥೆ ಮುಖ್ಯಸ್ಥ ನಾಗೇಶ್, ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಡಂಗಡ ವಾಸು ಬಿದ್ದಪ್ಪ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಹಿರಿಯರಾದ ಬಯವಂಡ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಆಶಾ ಜ್ಯೋತಿ,ಶಿಕ್ಷಕಿ ಕೆ.ಎಲ್.ರಶ್ಮಿ, ಕೆ.ದಮಯಂತಿ, ಪಾರ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net