

ಚಿತ್ರದುರ್ಗ:ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಮಠ-ಮಂದಿರಗಳಿಗೆ ಕರೆದೊಯ್ದು, ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕೆಂದು ಶ್ರೀ ಶಾರದಾ ರಾಮಕೃಷ್ಣ ಆಶ್ರಮದ ಕಾರ‌್ಯದರ್ಶಿ ಶ್ರೀ ಬ್ರಹ್ಮನಿಷ್ಠಾನಂದಜಿ ಹೇಳಿದರು.
ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಕಬೀರಾನಂದ ಸ್ವಾಮೀಜಿ ಅವರ 68 ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಸ್ವಾಮೀಜಿ ಅವರ 58 ನೇ ಪುಣ್ಯಾರಾಧನೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಂಸ್ಕಾರ ಒಳ್ಳೆಯ ಭವಿಷ್ಯಕ್ಕೆ ನಾಂದಿ. ಮಕ್ಕಳ ಕೈಗೆ ಮೊಬೈಲ್ ಕೊಡದೆ ಪುಸ್ತಕ ಕೊಡಿ. ಓದು ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಪಾಲಕರಲ್ಲಿ ಸಂಸ್ಕಾರವಿದ್ದರೆ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯುತ್ತಾರೆ ಎಂದರು.
ಜಿ.ಪಂ. ನಿವೃತ್ತ ವ್ಯವಸ್ಥಾಪಕ ನಾಗರಾಜ್ ಸಂಗಂ, ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜು ಮಾತನಾಡಿದರು.
ನಗರಸಭಾ ಸದಸ್ಯರಾದ ವೆಂಕಟೇಶ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೆಶಕ ಸಿದ್ದವ್ವನಹಳ್ಳಿ ಪರಮೇಶ್, ನಿವೃತ್ತ ಜಿಲ್ಲಾಧಿಕಾರಿ ಭೀಮಯ್ಯ, ಗಣಪತಿ ಶಾಸ್ತ್ರಿ, ನಿರಂಜನ ಮೂರ್ತಿ, ತಿಪ್ಪೇಸ್ವಾಮಿ ಇತರರು ಇದ್ದರು. ಸಾಹಿತಿ ಹುರಳಿ ಬಸವರಾಜು ಉಪನ್ಯಾಸ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಕಾಲೇಜು ಶಿಕ್ಷಣ ನಿರ್ದೇಶಕಿ ಡಾ.ಕಮಲಮ್ಮ, ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವಿ.ಎಲ್.ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಸುಬ್ರಾಯ ಭಟ್ ವೇದ ಘೋಷ ನಡೆಸಿಕೊಟ್ಟರು. ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿ, ಮುರುಗೇಶ್ ವಂದಿಸಿದರು.