ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವುದು ಅಗತ್ಯ

HUN-JAN-15-3(MADHAVA VIDYASAMSTHE PROGRAMME)
Published on

ಹುಣಸೂರು: ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ರಾಷ್ಟ್ರೀಯತೆ, ದೇಶಪ್ರೇಮದ ಮನೋಭಾವನೆ ರೂಪಿಸುವ ಅಗತ್ಯತೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮಾಧವ ಬಾಗಲ್ ಅಭಿಪ್ರಾಯಪಟ್ಟರು.

ನಗರದ ಮಾಧವ ವಿದ್ಯಾಸಂಸ್ಥೆಯಲ್ಲಿ ಬುಧವಾರ ಸೇವಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಅಜಿತ್ ಜೀ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯತೆ, ದೇಶಭಕ್ತಿ ಎನ್ನುವ ಪದಗಳು ಇಂದಿನ ದಿನಮಾನಸದಲ್ಲಿ ಬಹಳಷ್ಟು ದುರ್ಬಳಕೆಯಾಗುತ್ತಿದೆ. ಆದರೆ ದೇಶ ಮೊದಲು, ನಂತರ ಉಳಿದೆಲ್ಲವೂ ಎನ್ನುವುದನ್ನು ವಿದ್ಯಾರ್ಥಿಗಳಲ್ಲಿ ತಿಳಿಹೇಳುವ ಕಾಲ ಕೂಡಿಬಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಅಜಿತ್‌ಜೀ ದೇಶಪ್ರೇಮಿಯಾಗಿ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟರು ಎಂದು ಸ್ಮರಿಸಿದರು.

ಸೇವಾ ದಿನ ಎನ್ನುವುದು ನಾನು ಹುಟ್ಟಿ ಬೆಳೆದ ಈ ನೆಲವನ್ನು ಪ್ರೀತಿಸುವುದು, ಗೌರವಿಸುವುದು ಆಗಿದೆ. ದೇಶದ ಆಗಿಹೋದ ರಾಷ್ಟ್ರಭಕ್ತರ ಕುರಿತಾಗಿ ಗೌರವ ಭಾವನೆ ವಿದ್ಯಾರ್ಥಿಗಳಲ್ಲಿ ಇರಬೇಕು. ಅವರ ತ್ಯಾಗ ಬಲಿದಾನಗಳ ಮಹತ್ವವನ್ನು ಅರಿಯಬೇಕು. ದೇಶಸೇವೆ ಎನ್ನುವುದು ತನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನುವ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಮಾಡಿದಲ್ಲಿ ದೇಶ ಮುಂದಿನ ದಿನಗಳಲ್ಲಿ ಸದೃಢ ದೇಶಭಕ್ತರನ್ನು ಒಳಗೊಂಡ ಪರಿಪೂರ್ಣ ದೇಶವಾಗಲಿದೆ ಎಂದರು.

ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರಘುವೀರ್ ಜೀ ಅವರು ಅಜಿತ್ ಜೀ ಅವರ ಜೀವನ, ಹೋರಾಟಗಳ ಕುರಿತಂತೆ ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯಶಿಕ್ಷಕ ಎಚ್.ಕೆ.ವೆಂಕಟೇಶ್, ಬೀರೇಶ್ ಜೀ, ಚಂದ್ರು ಜೀ, ಜ್ಯೋತಿ, ಪ್ರಿಯಾ, ಹೇಮಾಬಾಯಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net