ಮಕ್ಕಳಲ್ಲಿ ಗ್ರಂಥಾಲಗಳ ಕುರಿತು ಅರಿವು ಮೂಡಿಸಿ : ಸಿಇಒ ಕಾಂತರಾಜು

ಮಕ್ಕಳಲ್ಲಿ ಗ್ರಂಥಾಲಗಳ ಕುರಿತು ಅರಿವು ಮೂಡಿಸಿ : ಸಿಇಒ ಕಾಂತರಾಜು
Published on

ಹಾಸನ : ಗ್ರಾಮೀಣ ಭಾಗದ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಗ್ರಂಥಾಲಯದ ಕುರಿತು ಅರಿವು ಮೂಡಿಸಿ, ಓದಿನ ಆಸಕ್ತಿ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮಾಹಿತಿ ಸಹಾಯಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಬೌದ್ಧಿಕ ವಿಕಾಸ ಹಾಗೂ ವಾತ್ಸಲ್ಯ ವರ್ಧಿತ ಜೀವನ ವೃದ್ಧಿಗೆ ಗ್ರಂಥಾಲಯಗಳ ಪಾತ್ರ ಹೆಚ್ವಿದ್ದು, ಗ್ರಂಥಾಲಯಗಳ ಪೋಷಣೆಗೆ ಎಲ್ಲರ ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಉತ್ತಮ ರಸ್ತೆ, ಗುಣಮಟ್ಟದ ಅಂಗನವಾಡಿ, ಶಾಲೆ ಮತ್ತು ಗ್ರಂಥಾಲಯವು ಅಷ್ಟೇ ಮುಖ್ಯವಾಗಿದ್ದು, ಗ್ರಂಥ ಮೇಲ್ವಿಚಾರಕರು ತಮ್ಮ ತಮ್ಮ ವ್ಯಾಪ್ತಿಯ ಗ್ರಂಥಾಲಯಗಳ ಸ್ವಚ್ಛತೆಯ ಕಡೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.


ಪುಸ್ತಕ ದೇಣಿಗೆ ಇತರೆ ಪೀಠೋಪಕರಣ ಹಾಗೂ ಸೌಕರ್ಯಗಳನ್ನು ಸ್ಥಳೀಯವಾಗಿ ಕ್ರೂಢೀಕರಿಸಲು ಗ್ರಂಥಪಾಳಕರು ಶ್ರಮಿಸಬೇಕು, ಉತ್ತಮ ಸಾಧನೆ ತೋರುವ ಗ್ರಂಥಪಾಲಕರಿಗೆ ಪ್ರತೀ ವರ್ಷ ಸನ್ಮಾನಿಸಲಾಗುವುದು ಎಂದು ತಿಳಿಸಿದರು.


ಪ್ರತಿ ಗ್ರಂಥಾಲಯದ ಗ್ರಂಥಪಾಲಕರಿಗೆ ಎರೆಡು ಜೊತೆ ಬಿಳಿ ಸಮವಸ್ತ್ರ ಕೊಡಲು ತೀರ್ಮಾನಿಸಲಾಗಿದ್ದು, ಗ್ರಂಥ ಪಾಲಕರು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳಲ್ಲಿ ಗ್ರಂಥಾಲಯದ ಬಗ್ಗೆ ಅರಿವು ಮೂಡಿಸಿ ಪುಸ್ತಕಗಳ ಬಗ್ಗೆ ಒಲವು ಮೂಡುವಂತೆ ಅವರ ಮನ ಒಲಿಸಿ ಎಂದು ತಿಳಿಸಿದರು.


ಅಗತ್ಯ ಪುಸ್ತಕ, ಬೆಂಚುಗಳು, ಟಿವಿ ಇನ್ನಿತರ ಮೂಲಸೌಕಾರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಗ್ರಂಥಪಾಲಕರು ಅದನ್ನು ಸದ್ಬಳಕೆ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಅವರು ಮಾತನಾಡಿ, ಗ್ರಾಮದ ಚಾರಿತ್ರ್ಯ, ಇತಿಹಾಸದ ಕುರಿತು ಪುಸ್ತಕ ತಯಾರು ಮಾಡಿ ಹಾಗೂ ಊರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡುವಂತಹ ವ್ಯವಸ್ಥೆ ಮಾಡಬೇಕಿದ್ದು, ಈ ಮೂಲಕ ಓದುಗರ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಅವರು ಮಾರ್ಗದರ್ಶನ ನೀಡಿದರು.

ಜ್ಞಾನವನ್ನು ಕಟ್ಟುವ ಕೆಲಸವನ್ನು ಪ್ರೋತ್ಸಾಹಿಸಿ ಮತ್ತಷ್ಟು ಅಭಿವೃಡಿಸಲು ಶ್ರಮಿಸುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಅಭಿನಂದನೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಹಾಸನದ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲ ಹಸೀನ್ ತಾಜ್, ಮಂಗಳೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲ ಗಾಯತ್ರಿ, ಹಾಸನದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಮುದ್ದಣ್ಣ ಮತ್ತಿರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net