ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸಿ

25 mlv 2
Published on

ಮಳವಳ್ಳಿ : ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬಹುಮುಖ ಪ್ರತಿಭೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ , ಪಾಲಕರ ಮೇಲಿದೆ ಎಂದು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಕುಸುಮಲತಾ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾಲಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಅಂಕ ಗಳಿಸಲು ಮಾತ್ರ ಒತ್ತಡ ಹೇರಬಾರದು. ಕೇವಲ ಪುಸ್ತಕ ಅಧ್ಯಯನ ಮಾಡಿ ಪಾಸಾದವರು ಸಾಧಕರಾಗಲು ಸಾಧ್ಯವಿಲ್ಲ. ಹಾಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಓದಿಗಷ್ಟೇ ಸೀಮಿತಗೊಳಿಸದೇ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಕಲೆಯನ್ನು ಪೋಷಿಸುವ ಮುಖೇನ ಬಹುಮುಖ ಪ್ರತಿಭೆಗಳನ್ನಾಗಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಶಾಲೆಯನ್ನು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸ್ನೇಹಿ ಕೇಂದ್ರವನ್ನಾಗಿ ಮಾಡಿ ಎಂದರು. ನಾವೆಲ್ಲರೂ ಸೇರಿ ಮಕ್ಕಳ ಶಿಕ್ಷಣ, ದೈಹಿಕ ಕ್ಷಮತೆ ಮತ್ತು ಪ್ರತಿಭೆಯನ್ನು ಉತ್ತೇಜಿಸಿ

ಅವುಗಳ ವಿಕಸನಕ್ಕೆ ಆದ್ಯತೆ ನೀಡೋಣ ಎಂದರು. ಪಾಲಕರಿಗೂ ಸ್ಫೂರ್ತಿ ನೀಡಲು ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಪ್ರಾಂಶುಪಾಲೆ ಕರುಣಾ ಕವಿತಾ ಕ್ರೀಡಾ ಜ್ಯೋತಿ ಬೆಳಗಿದರು. ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳ ಪಾಲಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರಾದ ಗೊಪಾಲಕೃಷ್ಣ, ಸುಶೀಲಾ, ದಿವ್ಯಶ್ರೀ, ಮಂಜುಳಾ, ರಜಿನಿ, ಮೇಘನಾ, ಅರ್ಪಿತಾ, ಪವಿತ್ರಾ, ವಿಶಾಲಾಕ್ಷಿ, ಕವಿತಾ, ಚಂದನಾ, ಪೂರ್ಣಿಮಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net