ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ

Boral
ಔರಾದ್ ತಾಲೂಕಿನ ಬೋರಾಳದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡವನ್ನು ಶಾಸಕ ಪ್ರಭು ಚವ್ಹಾಣ್ ಉದ್ಘಾಟಿಸಿದರು. ತಹಸೀಲ್ದಾರ್ ಮಹೇಶ ಪಾಟೀಲ್, ಬಿ.ಜೆ.ರಂಗೇಶ್, ಧೊಂಡಿಬಾ ನರೋಟೆ ಇತರರಿದ್ದರು.
Published on

ಔರಾದ್: ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಟ್ಟಡ, ಶಿಕ್ಷಕರು ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ದಾಖಲಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಮನವಿ ಮಾಡಿದರು.

ಬೋರಾಳದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಿಕ್ಷಣವೇ ಆಧಾರ. ನಾನು ಶಾಸಕನಾದ ನಂತರ ಶಿಕ್ಷಣ ಕ್ಷೇತ್ರದ ವಿಕಾಸಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಶಾಲೆ ನಿರ್ಮಿಸಿ ಅಗತ್ಯ ಸೌಕರ್ಯ ಒದಗಿಸುತ್ತಿದ್ದೇನೆ ಎಂದರು.

ಎಲ್ಲೆಡೆ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಶಿಕ್ಷಣ ಹೆಸರಿನಲ್ಲಿ ಬಡ ಜನರ ಸುಲಿಗೆ ನಡೆಯುತ್ತಿದೆ. ಹಣ ಪಾವತಿಸಲು ನಾನಾ ರೀತಿಯ ಸಂಕಷ್ಟ ಎದುರಿಸುತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಹೀಗಾಗಿ ಖಾಸಗಿ ಶಾಲೆಯವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಸಾಲ ಮಾಡಿ ಜೀವನವನ್ನು ನರಕ ಮಾಡಿಕೊಳ್ಳಬೇಡಿ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣವಿದೆ. ಏನಾದರೂ ಕೊರತೆಗಳಿದ್ದಲ್ಲಿ ನನ್ನ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ. ಆದರೆ ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲಿಸಿ ಎಂದು ಕೋರಿದರು.

ಬೋರಾಳದಲ್ಲಿ ಹೊಸ ಸರ್ಕಾರಿ ಶಾಲೆ ನಿರ್ಮಿಸಬೇಕೆಂಬ ಬೇಡಿಕೆ ಬಂದ ತಕ್ಷಣ ಅನುದಾನ ಮಂಜೂರು ಮಾಡಿದೆ. ಇದೀಗ ಶಾಲೆ ನಿರ್ಮಾಣಗೊಂಡಿದೆ. ಹೊಸ ಶಾಲೆ ನಿರ್ಮಿಸುವಾಗ ಅಂದಾಜು ಪಟ್ಟಿಯಲ್ಲಿ ಕಡ್ಡಾಯವಾಗಿ ಶೌಚಗೃಹ ಸೇರಿಸುವಂತೆ ಹೇಳಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಶೌಚಗೃಹ, ಕುಡಿಯುವ ನೀರು, ಆಟದ ಮೈದಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ತುರ್ತಾಗಿ ಆಗಬೇಕೆಂದು ಗ್ರಾಪಂ ಪಿಡಿಒಗೆ ನಿರ್ದೇಶನ ನೀಡಿದರು.

ಸಾಕಷ್ಟು ಸರ್ಕಾರಿ ಶಾಲೆಗಳ ಜಾಗ ಕಂದಾಯ ಇಲಾಖೆಯಲ್ಲಿ ನೋಂದಣಿ ಆಗದ ಕಾರಣ ಒತ್ತುವರಿಯಾಗುತ್ತಿದೆ. ಹಿಂದೆ ದಾನವಾಗಿ ನೀಡಿದ ಜಮೀನುಗಳನ್ನು ವಾರಸುದಾರರು ಮತ್ತೆ ವಾಪಸ್ ಪಡೆಯುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಹೀಗಾಗಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮನ್ವಯದಿಂದ ಎಲ್ಲ ಸರ್ಕಾರಿ ಶಾಲೆಗಳ ಜಾಗದ ನೋಂದಣಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಮಹೇಶ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್, ಅರಣ್ಯ ಅಧಿಕಾರಿಗಳಾದ ಗಜಾನಂದ, ಮುದ್ದಸಿರ್ ಅಹ್ಮದ್, ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಶಿವರಾಜ ಅಲ್ಮಾಜೆ, ಶಿವಶಂಕರ ಮಣಿಗೆಂಪುರ, ನಿರ್ಮಿತಿ ಕೇಂದ್ರದ ಮಹ್ಮದ್ ನಜೀರ್, ಮುಖ್ಯಗುರು ರಾಜೇಂದ್ರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಢರಿ ಆಡೆ, ಕಸಾಪ ತಾಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ಪಿಡಿಒ ವಿಜಯಲಕ್ಷ್ಮೀ ಪಾಟೀಲ್, ಸಹದೇವ ಮಚಕೂರೆ, ನಿವರ್ತಿ ಪಾಟೀಲ್, ಬಜರಂಗ ಪಾಂಡ್ರೆ, ಗಣಪತರಾವ ಮಚಕೂರೆ, ಪ್ರದೀಪ್ ಗುಬನೂರೆ, ದೇವಿದಾಸ ಪಾಂಡ್ರೆ, ಜಗನಾಥ ಮಚಕೂರೆ ಇತರರಿದ್ದರು.

ಗ್ರಾಮದ ಹಿತದೃಷ್ಟಿಯಿಂದ ಎಲ್ಲ ವರ್ಗದ ಜನ ಒಳಗೊಂಡು ಸಮಿತಿ ರಚಿಸಬೇಕು. ಬ್ಯಾಂಕ್ ಖಾತೆ ತೆರೆದು ಹಣ ಸಂಗ್ರಹಿಸಿ ಸಂಕಷ್ಟದಲ್ಲಿದ್ದವರ ನೆರವಿಗೆ ಬಳಸಿಕೊಳ್ಳಬೇಕು. ಇದಕ್ಕೆ ನನ್ನ ಸಹಕಾರ ಇರಲಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹ ಮುಂದಾಗಬೇಕು.

| ಪ್ರಭು ಚವ್ಹಾಣ್

ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net