

ಚಿಕ್ಕಬಳ್ಳಾಪುರ : ಕರೊನಾ ಸೋಂಕಿನ ಲಾಕ್‌ಡೌನ್ ಮತ್ತು ಸೀಲ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಸವ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಜಿಲ್ಲಾ ಕೇಂದ್ರದಲ್ಲಿನ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಿ.ಎನ್.ನಾಗಪ್ರಶಾಂತ್ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅನುಭವ ಮಂಟಪ ಸ್ಥಾಪನೆ, ವಚನಗಳ ಸಂದೇಶ ಮತ್ತು ಕಾಯಕದ ಮೂಲಕ ಬಸವಣ್ಣ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದರು. ಇವರ ಆದರ್ಶ ತತ್ವಗಳ ಪಾಲನೆಯು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ. ಇದಕ್ಕೆ ಪಾಲಕರು ಬಸವಣ್ಣನ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿ, ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಮತ್ತಿತರರು ಇದ್ದರು.
ಪೂಜೆಗೆ ಮಾತ್ರ ಸೀಮಿತ : ಪ್ರತಿ ವರ್ಷ ವೀರಶೈವ ಸೇವಾ ಸಮಾಜ, ವೀರಶೈವ ಮಹಿಳಾ ಸಮಾಜದಿಂದ ಬಸವೇಶ್ವರ ಜಯಂತಿಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಚನಕಾರರ ವೇಷಾವಳಿ, ವಚನ ಗಾಯನ, ಅನ್ನಸಂತರ್ಪಣೆ ಸೇರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ನಗರದ ಬಸವನಗುಡಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ವೀರಶೈವ ಸೇವಾ ಸಮಾಜದ ಮುಖಂಡರು ಮನೆಗಳಲ್ಲಿಯೇ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮತ್ತು ವಚನಗಳ ಗಾಯನದ ಮೂಲಕ ಜಯಂತ್ಯುತ್ಸವವ ಆಚರಿಸಿದರು. ಜಿಲ್ಲಾಡಳಿತ ಧಾರ್ಮಿಕ ಕೇಂದ್ರಗಳ ಕಾರ್ಯ ಸ್ಥಗಿತಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಯಾರೂ ಬಸವನಗುಡಿ ಆಲಯಗಳಿಗೆ ಭೇಟಿ ಕೊಡಲಿಲ್ಲ.