ಮಕ್ಕಳ ಹಾಜರಾತಿ ಹೆಚ್ಚಳ, ಸರ್ಕಾರಿ ಶಾಲೆಗಳೇ ಮುಂದು ತಗ್ಗಿದ ಕರೊನಾ ಆತಂಕ, ಪಾಲಕರಿಂದಲೂ ಗ್ರೀನ್ ಸಿಗ್ನಲ್

22
Published on

ಬೆಂ.ಗ್ರಾಮಾಂತರ: ಶಾಲೆಗಳ ಪುನರಾರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿನೇದಿನೆ ಏರಿಕೆಯಾಗುತ್ತಿದೆ. ಬುಧವಾರ ಜಿಲ್ಲೆಯಾದ್ಯಂತ ಶೇ.66.53 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಶೇ.73, ಅನುದಾನಿತ ಶಾಲೆಗಳಲ್ಲಿ ಶೇ.68 ಹಾಗೂ ಖಾಸಗಿ ಶಾಲೆಗಳಲ್ಲಿ ಶೇ.66.53 ವಿದ್ಯಾರ್ಥಿಗಳ ಹಾಜರಾತಿ ಕಂಡುಬಂದಿದೆ. ಹೆಚ್ಚಿನ ಹಾಜರಾತಿಯಲ್ಲಿ ಸರ್ಕಾರಿ ಶಾಲೆಗಳೇ ಮುಂದಿವೆ. ಜಿಲ್ಲೆಯಲ್ಲಿ 297 ಪ್ರೌಢಶಾಲೆಗಳಿದ್ದು, 9,10ನೇ ತರಗತಿಯ 29,029 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಇದರಲ್ಲಿ 19,295 ಮಂದಿ ಶಾಲೆ ಆರಂಭದಿಂದಲೂ ಹಾಜರಾಗುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ದೇವನಹಳ್ಳಿ ತಾಲೂಕಿನಲ್ಲಿ 67, ದೊಡ್ಡಬಳ್ಳಾಪುರ 60, ಹೊಸಕೋಟೆ 100 ಹಾಗೂ ನೆಲಮಂಗಲದಲ್ಲಿ 70 ಪ್ರೌಢಶಾಲೆಗಳಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಾಲೆ ಆರಂಭದಲ್ಲಿದ್ದ ಆತಂಕ ದೂರವಾಗುತ್ತಿದ್ದು, ಪಾಲಕರೂ ಸಹ ಶಾಲೆಗೆ ಕಳುಹಿಸಲು ಉತ್ಸಾಹ ತೋರಿಸುತ್ತಿದ್ದಾರೆ, ಬಹುಪಾಲು ಪಾಲಕರು ಶಾಲೆಗಳಿಗೆ ಭೇಟಿ ನೀಡಿ ಕರೊನಾ ಮುಂಜಾಗ್ರತಾ ಕ್ರಮ ಪರಿಶೀಲಿಸಿದ ಬಳಿಕ ಸಮಾಧಾನಗೊಂಡಿರುವುದರಿಂದ ಹಾಜರಾತಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದ್ದಾರೆ.

ಬಿಸಿ ನೀರಿನ ವ್ಯವಸ್ಥೆ: ಸರ್ಕಾರದ ಸುತ್ತೋಲೆಯಂತೆ ಮಕ್ಕಳೇ ಉಪಾಹಾರ ಹಾಗೂ ಕುಡಿಯುವ ನೀರು ತರುತ್ತಿದ್ದಾರೆ, ಆದರೆ ಕೆಲವೊಂದು ಮಕ್ಕಳು ತರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲೇ ಬಿಸಿ ನೀರು ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಆಪ್‌ಲೈನ್: 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಸದ್ಯಕ್ಕೆ ಭೌತಿಕ ತರಗತಿಗಳಿಲ್ಲ, ಆದ್ದರಿಂದ ಶಾಲಾ ಕಟ್ಟಡದಲ್ಲಿನ ಕೊಠಡಿಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಬೆಳಗ್ಗಿನಿಂದ ಸಂಜೆವರೆಗೆ ಭೌತಿಕ ತರಗತಿ ನಡೆಯಲು ತೊಂದರೆಯಿಲ್ಲ, ಆನ್‌ಲೈನ್ ತರಗತಿಗೆ ಬದಲಾಗಿ ಆಪ್‌ಲೈನ್ ತರಗತಿ ನಡೆಸುವುದೇ ಸೂಕ್ತ ಎಂಬ ಮಾತು ಕೇಳಿಬರುತ್ತಿದ್ದು, ಈ ಬಗ್ಗೆ ಇಲಾಖೆ ಸರ್ಕಾರದ ಅನುಮತಿ ಕೋರಲು ಚಿಂತಿಸಿದೆ ಎನ್ನಲಾಗಿದೆ.

ಮಕ್ಕಳ ಆರೋಗ್ಯ ರಕ್ಷಣೆ ಜತೆಗೆ ಅವರ ಶೈಕ್ಷಣಿಯ ಭವಿಷ್ಯವೂ ಮುಖ್ಯ ಎಂದು ಶಾಲೆಗಳ ಪುನರಾರಂಭಿಸಲಾಗಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಕ್ಕಳಿಗೂ ವ್ಯಾಕ್ಸಿನ್ ನೀಡುವ ಬಗ್ಗೆ ಪ್ರಾಯೋಗಿಕ ಹಂತದಲ್ಲಿದೆ. ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕ, ಬೋಧಕೇತರ ಸಿಬ್ಬಂದಿ ಕರೊನಾ ನಿಯಮಗಳೊಂದಿಗೆ ಮಕ್ಕಳ ಭವಿಷ್ಯ ರೂಪಿಸುವತ್ತ ಕಾಳಜಿ ವಹಿಸಬೇಕಿದೆ. ಎಂಟಿಬಿ ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ ದಿನೇ ದಿನೆ ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ವಿಷಯ. ಪ್ರತಿದಿನ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ, ಸ್ಯಾನಿಟೈಸೇಷನ್ ಮತ್ತಿತರ ಕ್ರಮಗಳ ಬಗ್ಗೆ ನಿಗಾವಹಿಸಲಾಗಿದೆ. ಗಂಗಮಾರೇಗೌಡ, ಡಿಡಿಪಿಐ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net