

ಕಡೂರು: ಸರ್ಕಾರ ಮಕ್ಕಳ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಮಕ್ಕಳು ಬೆಳೆದು ದೇಶವನ್ನು ಮುನ್ನಡೆಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ್ ಭಜಂತ್ರಿ ತಿಳಿಸಿದರು.
ತಾಪಂನಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳು, ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನದ ಆಶಯದಂತೆ ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಮಕ್ಕಳು ಯಾವುದೇ ಕಿರುಕುಳ, ಅಡೆತಡೆಗಳಿಲ್ಲದೆ ಬಾಲ್ಯ ಅನುಭವಿಸಬೇಕು. ಆಟ-ಪಾಠಗಳಲ್ಲಿ ಶಿಕ್ಷಣ ಮತ್ತು ಓಡಾಟಗಳಲ್ಲಿ ತೊಡಗಿದಾಗ ಸದೃಢ ಮನಸ್ಸಿನಿಂದ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಲೈಂಗಿಕ ಶೋಷಣೆ, ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳಲು ಮುಂತಾದ ಕೃತ್ಯಗಳನ್ನು ಎಸಗಲು ಮಾನವ ಕಳ್ಳ ಸಾಗಣೆ ಮಾಡುತ್ತಾರೆ. ಪಿಡಿಒಗಳು, ಕಾರ್ಯದರ್ಶಿಗಳು, ಬಾಲ್ಯವಿವಾಹ ನಿಷೇಧಾಧಿಕಾರಿಗಳು ಹಾಗೂ ಜನನ ಮತ್ತು ಮರಣ ನೋಂದಣಾಧಿಕಾರಿಗಳು ಇಂಥ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ದಿನೇಶ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಮಾಹಿತಿ ನೀಡಲಿದ್ದು ಎಲ್ಲರೂ ತಿಳಿದುಕೊಳ್ಳಬೇಕು. ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬರುತ್ತಿದ್ದು ಈಗಾಗಲೇ ಪಿಡಿಒಗಳಿಗೆ ಮಾಹಿತಿ ನೀಡಿದ್ದು, ಎಲ್ಲ ಇಲಾಖೆಗಳ ಸಹಕಾರದಿಂದ ಬಾಲ್ಯವಿವಾಹ ತಡೆಯೋಣ ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್.ಶಿವಪ್ರಕಾಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾವಲು ಸಮಿತಿಗಳನ್ನು ರಚನೆ ಮಾಡಿದ್ದು, ಇದರ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಬಾಲ್ಯವಿವಾಹಗಳನ್ನು ತಡೆದಿದ್ದು, ಕೆಲವೊಂದು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಹೇಳಿದರು. ಜಿಲ್ಲಾ ಅಂಗವಿಕಲ ಅಧಿಕಾರಿ ವೀರಭದ್ರಯ್ಯ ಇದ್ದರು.