ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಕರ್ನಾಟಕ ಪ್ರಥಮ

15
Published on

ಮೈಸೂರು; ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಆರ್.ಜಿ.ಆನಂದ್ ತಿಳಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ ಕಳೆದ 5 ವರ್ಷಗಳಿಂದ ನಿಗಾ ವಹಿಸಲಾಗಿದೆ. ಇದನ್ನು ಆಧರಿಸಿ ಕರ್ನಾಟಕದಲ್ಲಿ ಉತ್ತಮ ಕೆಲಸಗಳು ಆಗಿವೆ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.


ಮಕ್ಕಳ ಪ್ರಕರಣಗಳ ಮೇಲೆ ನಿಗಾ ವಹಿಸಲು ‘ಎಂಎಎಸ್‌ಐ’ ಆ್ಯಪ್ ರೂಪಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ, ರಾಜ್ಯ ಮಟ್ಟದ ಸಮಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ಮೇಲೆ ಕಣ್ಗಾವಲು ಇಡಲಾಗುತ್ತಿದೆ. ಪ್ರಕರಣ ವಿಚಾರಣೆ, ಇತ್ಯರ್ಥ, ಪರಿಹಾರ ಇನ್ನಿತರ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ಗಮನಿಸಿ, ನ್ಯೂನತೆ ಕಂಡುಬಂದರೆ ಆಯಾ ಸಮಿತಿಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದರು.


ಬಾಲ್ಯವಿವಾಹ ಸಮಸ್ಯೆ ದೇಶದ ವಿವಿಧ ಭಾಗದಲ್ಲಿ ವಿಭಿನ್ನವಾಗಿದ್ದು, ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಹಿನ್ನೆಲೆಯಲ್ಲಿ ಕೆಲವು ಕಡೆ ಅಪ್ರಾಪ್ತರ ಮದುವೆಗಳು ಆಗುತ್ತಿವೆ. ಹಿಮಾಚಲಪ್ರದೇಶದ ಪ್ರಕರಣಕ್ಕೂ ಕರ್ನಾಟಕದ ಬಾಲ್ಯವಿವಾಹ ಪ್ರಕರಣಕ್ಕೂ ವ್ಯತ್ಯಾಸವಿದ್ದು, ಅದನ್ನು ತಡೆಗಟ್ಟಲು ಸ್ಥಳೀಯ ಮಾದರಿಯಲ್ಲೇ ಕ್ರಮ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತಿದೆ. ಆದಾಗ್ಯೂ ಸಂಬಂಧಿಗಳಿಂದಲೇ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಘಟನೆಗಳು ತಲೆತಗ್ಗಿಸುವಂತೆ ಮಾಡಿವೆ. ಮಕ್ಕಳ ಹಕ್ಕು ರಕ್ಷಣೆ ಹಾಗೂ ಅವರ ಮೇಲಿನ ಶೋಷಣೆ ತಡೆಗಟ್ಟಲು ಗ್ರಾಮ ಮಟ್ಟದಿಂದಲೇ ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.


ಈ ಸಮಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಮಕ್ಕಳ ಪರ ಕೆಲಸ ಮಾಡುವ ಎನ್‌ಜಿಒ ಸೇರಿದಂತೆ 8 ರಿಂದ 10 ಸದಸ್ಯರು ಇರಲಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ನೇತೃತ್ವದಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು.
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ 7 ಹಂತದಲ್ಲಿರುವ ಸಮಿತಿಗಳು ಮಕ್ಕಳ ಹಕ್ಕು ರಕ್ಷಣೆಗೆ ಶ್ರಮಿಸುತ್ತಿವೆ. ಮಕ್ಕಳ ಹಕ್ಕು ಉಲ್ಲಂಘನೆ ತಡೆದು, ಅವುಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಆಯೋಗದ ರಾಜ್ಯ ಮಟ್ಟದ ಸಮಿತಿ ರಚನೆಯಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಸಮಿತಿ ರಚನೆ ಬಾಕಿ ಉಳಿದಿದೆ. ಎಲ್ಲ ಜಿಲ್ಲಾ ಸಮಿತಿಗಳ ಸದಸ್ಯತ್ವ ಸ್ಥಾನಕ್ಕೆ ಅರ್ಜಿಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದರು.
ಬಾಲ್ಯವಿವಾಹ, ಶಿಕ್ಷಣಹಕ್ಕು ಕಾಯ್ದೆ(ಆರ್‌ಟಿಇ) ಮತ್ತು ಪೋಕ್ಸೋ ಕಾಯ್ದೆಯಡಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ತಳಮಟ್ಟದಲ್ಲೇ ಇವುಗಳ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.


ಅರಿವಿನ ಕೊರತೆಯಿಂದಾಗಿ ಆತುರದಲ್ಲಿ ಬಾಲ್ಯ ವಿವಾಹವಾಗುತ್ತಿವೆ. ಇದು ಬಾಲ್ಯ ವಿವಾಹವಲ್ಲ, ಜೈಲು ವಿವಾಹ. ಮದುವೆಯಾದ ಬಳಿಕ ಕಾರಾಗೃಹ ಸೇರುವಂತಾಗಿದೆ. ಅಪ್ರಾಪ್ತರು ಮದುವೆಯಾಗಿ ಗರ್ಭಿಣಿಯಾದ ಸಂದರ್ಭದಲ್ಲಿ ರಕ್ತ ಮಾದರಿಯಲ್ಲಿ ವಯಸ್ಸಿನ ನಿಖರ ಮಾಹಿತಿ ಗೊತ್ತಾಗಲಿದೆ. ಆಗಲೂ ಸಿಕ್ಕಿ ಬೀಳಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ನಗರದ ಸಾತಗಳ್ಳಿಯ 2 ಎಕರೆ ಪ್ರದೇಶದಲ್ಲಿ ಮಕ್ಕಳ ನಿಗಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಮಕ್ಕಳ ರಕ್ಷಣಾ ಕೇಂದ್ರದಲ್ಲಿ 7 ಬಾಲಕರು, 56 ಹೆಣ್ಣು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ವಿವಿಧ ಪ್ರಕರಣಗಳ ಸಂತ್ರಸ್ತರು ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಇದ್ದಾರೆ. ಕಳೆದ ಏಪ್ರಿಲ್‌ನಿಂದ ಈವರೆಗೆ 201 ಬಾಲ್ಯ ವಿವಾಹಗಳು ಜಿಲ್ಲೆಯಲ್ಲಿ ವರದಿಯಾಗಿವೆ. 164 ಪ್ರಕರಣಗಳನ್ನು ತಡೆಯಲಾಗಿದೆ. 38 ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ 700 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, ಇವರನ್ನು ಮತ್ತೆ ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸುವ ಕೆಲಸ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net