ಮಕ್ಕಳ ಹಕ್ಕುಗಳ ರಕ್ಷಣೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಿ

16 HANUR 1
ಹನೂರಿನಲ್ಲಿ ಡಾನ್ ಬೋಸ್ಕೋ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಾಗಾರವನ್ನು ಬಿಇಒ ಶಿವರಾಜು ಉದ್ಘಾಟಿಸಿದರು. ದಿನೇಶ್, ದೇವರಾಜು, ವೆಂಕಟೇಶ್, ಜ್ಞಾನಮಣಿ ಇತರರು ಇದ್ದರು.
Published on

ಹನೂರು: ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಮಕ್ಕಳ ಹಕ್ಕುಗಳು ಪ್ರಧಾನ ಪಾತ್ರ ವಹಿಸಿವೆ. ಆದ್ದರಿಂದ ಶಿಕ್ಷಕರು ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಇಒ ಶಿವರಾಜು ಸಲಹೆ ನೀಡಿದರು.

ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ಗುರುವಾರ ಮೈಸೂರಿನ ಡಾನ್‌ಬೋಸ್ಕೋ ಮಕ್ಕಳಾಲಯ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಗಾಗಿ ಮಕ್ಕಳನ್ನು ರಕ್ಷಿಸುವುದು ಮತ್ತು ಅವರ ಅವಶ್ಯಕತೆಗಳನ್ನು ಪೂರೈಸುವುದು ಪ್ರತಿಯೊಬ್ಬರ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲ ಕಾರ್ಮಿಕರ ನಿಷೇಧ, ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧ ಸೇರಿದಂತೆ ಮಕ್ಕಳ ರಕ್ಷಣೆಗಾಗಿ ಇನ್ನು ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಕಾಯ್ದೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಿದ್ದು, ಈಗಾಗಲೇ ಶಾಲೆಗಳಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.

ಡಾನ್‌ಬೋಸ್ಕೋ ಸಂಸ್ಥೆಯ ಸಂಯೋಜಕ ಟೋನಿ ಕ್ಲಿಫರ್ಡ್ ಮಾತನಾಡಿ, ಸಂಸ್ಥೆಯ ವತಿಯಿಂದ ರಾಜ್ಯದ 23 ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಚಾ.ನಗರ ಜಿಲ್ಲೆಯಲ್ಲಿ ಇದೀಗ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಹನೂರು ಶೈಕ್ಷಣಿಕ ವಲಯದ 27 ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳು ಭಾಗಿಯಾಗಿದ್ದಾರೆ. ಪ್ರತಿ ಶಾಲೆಯಲ್ಲೂ ಮಕ್ಕಳ ಗ್ರಾಮಸಭೆ, ಸಂಘ ರಚನೆ, ಕಾವಲು ಸಮಿತಿ ರಚನೆ ಸಂಬಂಧ ಕೈಪಿಡಿಯನ್ನು ತಯಾರಿಸಲಾಗಿದ್ದು, ಇದರಂತೆಯೇ ಕಾರ್ಯನಿರ್ವಹಿಸುವಂತೆ ಶಿಕ್ಷಕರು ಸೇರಿದಂತೆ ಗ್ರಾಪಂ ಜನಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಾಲಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಆರ್‌ಸಿ ದಿನೇಶ್, ಸಿಆರ್‌ಪಿ ದೇವರಾಜು, ಶಿಕ್ಷಕ ವೆಂಕಟೇಶ್, ಸಂಸ್ಥೆಯ ಕಾರ್ಯಕರ್ತರಾದ ಚಂದ್ರಕಾಂತ್, ಜ್ಞಾನಮಣಿ ಹಾಗೂ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net