ಮಕ್ಕಳ ಸ್ನೇಹಿ ಶಿಕ್ಷಕರನ್ನು ನೇಮಿಸಿ

18KWR6
Published on

ಕಾರವಾರ: ಮುಂಬರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸೂಕ್ತ ಧೈರ್ಯ ತುಂಬಲು ಮಕ್ಕಳ ಸ್ನೇಹಿ ಶಿಕ್ಷಕರನ್ನು ನೇಮಿಸಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಕರೊನಾ ಭಯ ಇರುವ ಕಾರಣ ಮಕ್ಕಳಿಗೆ ಪರೀಕ್ಷೆ ಎದುರಿಸುವ ಕುರಿತು ಹಾಗೂ ಬಸ್​ನಲ್ಲಿ ಬರುವ ಕುರಿತು ಕಾಳಜಿ ವಹಿಸಲು ಮಕ್ಕಳ ಸ್ನೇಹಿ ಶಿಕ್ಷಕರನ್ನು ನೇಮಿಸಬೇಕು. ಯಾರೊಬ್ಬರೂ ಪರೀಕ್ಷೆಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮಾಹಿತಿ ಗ್ರಾಪಂ ಪಿಡಿಒಗಳಿಗೆ ಇರಬೇಕು. ತಾಪಂ ಇಒ ಆ ಕುರಿತು ಮೇಲುಸ್ತುವಾರಿ ವಹಿಸುವಂತೆ ಸೂಚಿಸಿದರು.

ತಹಸೀಲ್ದಾರ್ ರಾಮಚಂದ್ರ ಕಟ್ಟಿ, ತಾಪಂ ಇಒ ಆನಂದಕುಮಾರ್ ಡಿಡಿಪಿಐ ಹರೀಶ ಗಾಂವಕರ್ ಇದ್ದರು.

ಕ್ರೀಡಾಂಗಣ ಅಭಿವೃದ್ಧಿ: ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿಗೆ 1.53 ಕೋಟಿ ರೂ. ಬಿಡುಗಡೆಯಾಗಿದ್ದು, ಕಾರ್ಯೋನ್ಮುಖರಾಗುವಂತೆ ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು.

ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ 47.50ಲಕ್ಷ ರೂ., ಮುಖ್ಯಮಂತ್ರಿಗಳ ವಿವೇಚನಾ ನಿಧಿಯಲ್ಲಿ 76 ಲಕ್ಷ ರೂ.ಯುವ ಸಬಲೀಕರಣ ನಿಧಿಯಿಂದ 30 ಲಕ್ಷ ರೂ.ಮಂಜೂರಾಗಿದೆ.

ಕ್ರೀಡಾಂಗಣ ಸುತ್ತ ಚರಂಡಿ ವ್ಯವಸ್ಥೆ, ಆವರಣಗೋಡೆ, ಗ್ಯಾಲರಿ, ಶೌಚಗೃಹ, ವಿಶ್ರಾಂತಿ ಕೊಠಡಿ, ಇಲಾಖೆ ಕಚೇರಿ, ಜಿಮ್ 200 ಮೀಟರ್ ಓಟದ ಟ್ರ್ಯಾಕ್, ವಿವಿಧ ಗುಂಪು ಆಟಗಳ ಕ್ರೀಡಾಂಗಣವನ್ನು ಸಮರ್ಪಕವಾಗಿ ನಿರ್ವಿುಸುವಂತೆ ಸೂಚಿಸಿದರು.

ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಜಿ.ಗಾಯತ್ರಿ, ತರಬೇತುದಾರ ಪ್ರಕಾಶ ರೇವಣಕರ್ ಸಭೆಯಲ್ಲಿದ್ದರು.

ಮೀನುಗಾರರ ಸಾಲ ಮನ್ನಾಕ್ಕೆ ಆಗ್ರಹ: ಮೀನುಗಾರರ ಎಲ್ಲ ಸ್ವರೂಪದ ಸಾಲ ಮನ್ನಾ ಮಾಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ಸಂದರ್ಭದಲ್ಲೂ ಶಾಸಕರು ಮನವಿ ಮಾಡಿದ್ದರು. ಪ್ರವಾಹ, ಹವಾಮಾನ ವೈಪರೀತ್ಯ, ಕರೊನಾ ಕಾರಣದಿಂದ ಸಾಕಷ್ಟು ಹಾನಿ ಅನುಭವಿಸಿದ್ದು, ಅವರಿಗೆ ನೆರವಾಗುವಂತೆ ಶಾಸಕಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net