

ಕೆ.ಆರ್.ಸಾಗರ : ಮಕ್ಕಳ ಜತೆ ಯಾವುದೇ ವ್ಯಕ್ತಿ ಅನುಚಿತವಾಗಿ ವರ್ತಿಸಿದರೆ ಅಂತಹ ಸಂತ್ರಸ್ತ ಮಕ್ಕಳು ಮಕ್ಕಳ ಸಹಾಯವಾಣಿ 1098 ಅಥವಾ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದು ಎಂದು ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ ಕರ್ಕಿಕಟ್ಟೆ ತಿಳಿಸಿದರು.
ಕೆ.ಆರ್.ಸಾಗರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ ಪೊಲೀಸರ ಮೊದಲ ಆದ್ಯತೆಯಾಗಬೇಕು. ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಕೆಲವು ಕಿಡಿಗೇಡಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಸಂಬದ್ಧ ಚಾಟಿಂಗ್, ಅಶ್ಲೀಲ ಮೆಸೇಜ್ ಕಳುಹಿಸುವುದು, ಚುಡಾಯಿಸುವುದರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸುತ್ತೇವೆ. ನಿಮ್ಮ ಅಕ್ಕ-ಪಕ್ಕದಲ್ಲಿ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಂಡಲ್ಲಿ ತಕ್ಷಣ 112 ಗೆ ಕರೆ ಮಾಡಿ ತಿಳಿಸಬೇಕು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ದಾಸರಾಗಬೇಡಿ, ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸಿ ಎಂದರು. ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಚಂದ್ರು, ಯೋಗರಾಜು, ರವಿ, ಕ್ರೈಂ ಪಿ.ಎಸ್‌ಐ ಶಿವರಾಜು, ಎಎಸ್‌ಐ ಜಯಸುಂದರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.