ಮಕ್ಕಳ ಸುಪ್ತಪ್ರತಿಭೆ ಅನಾವರಣಗೊಳಿಸಿ

Unleash the latent talent of children
ಕೊಲ್ಹಾರ ಪಟ್ಟಣದ ಆಝಾದ್ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಹೆಚ್ಚುವರಿಯಾಗಿ ಕಟ್ಟಿಸಿರುವ ಎರಡು ಕೋಣೆಗಳ ಕಟ್ಟಡವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಅಲ್‌ಹಾಜ್ ಡಾ. ಭಕ್ತಿಯಾರಖಾನ ಪಠಾಣ, ತಾಪಂ ಇಒ ಎಫ್.ಬಿ. ಪಠಾಣ, ರಫೀಕ ಪಕಾಲಿ ಇತರರಿದ್ದರು.
Published on

ಕೊಲ್ಹಾರ: ಶಿಕ್ಷಕರಾದವರು ವೃತ್ತಿ ಗೌರವ ಕಾಪಾಡಿಕೊಂಡು ಮಕ್ಕಳ ಜ್ಞಾನಾರ್ಜನೆ ವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಕೆಲವರು ವ್ಯಥಾ ರಾಜಕಾರಣ ಮಾಡುತ್ತಾ ವೃತ್ತಿ ಗೌರವದ ಘನತೆಯನ್ನು ಹಾಳುಮಾಡುತ್ತಿರುವುದು ಶೋಭೆತರುವುದಿಲ್ಲ ಎಂದು ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ ಸಚಿವ ಶಿವಾನಂದ ಪಾಟೀಲ ಮಾರ್ಮಿಕವಾಗಿ ಹೇಳಿದರು.

ಶನಿವಾರ ಪಟ್ಟಣದ ಆಝಾದ್ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಹೆಚ್ಚುವರಿಯಾಗಿ ಕಟ್ಟಿಸಿರುವ ಎರಡು ಕೋಣೆಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ಸಮಾಜದಲ್ಲಿ ಅವರನ್ನು ಬೆಳಕಿಗೆ ತರಲು ಶ್ರಮಿಸಿ ಎಂದು ಸಲಹೆ ನೀಡಿದರು.

ತಾಲೂಕು ಕೇಂದ್ರವಾದ ಕೊಲ್ಹಾರದಲ್ಲಿ ತಾಲೂಕು ಆಡಳಿತ ವ್ಯವಸ್ಥೆಗೆ ಅವಶ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡಿಸಲಾಗುವುದು. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬೇಗನೇ ಭೂಮಿ ಪೂಜೆ ನೆರವೇರಿಸುವ ಘಳಿಗೆಯೂ ಕೂಡಿ ಬರಲಿದೆ. ಹುಬ್ಬಳ್ಳಿ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿರುವ ಈ ಕೆನೆಮೊಸರಿನ ಊರನ್ನು ಮಾದರಿ ಸುಂದರ ಪಟ್ಟಣವನ್ನಾಗಿ ಮಾಡಲು ಎಲ್ಲರ ಸಹಕಾರದಿಂದ ಶ್ರಮಿಸುತ್ತೇನೆ ಎಂದರು.

ಕೊಲ್ಹಾರ ಪಟ್ಟಣ, ಸುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲವಾಗುವ ಹಾಗೆ, ಸರ್ಕಾರಿ ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳ ಪದವಿಪೂರ್ವ, ಪದವಿ ಮಹಾವಿದ್ಯಾಲಯ, ಜೊತೆಗೆ ಮೆಟ್ರಿಕ್‌ಪೂರ್ವ, ನಂತರದ ಬಾಲಕ-ಬಾಲಕಿಯರ ವಸತಿ ನಿಲಯಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಲ್‌ಹಾಜ್ ಡಾ. ಭಕ್ತಿಯಾರಖಾನ ಪಠಾಣ ಸಾನಿಧ್ಯ ವಹಿಸಿದ್ದರು. ತಾಪಂ ಇಒ ಎಫ್.ಬಿ. ಪಠಾಣ, ರಫೀಕ ಪಕಾಲಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೊಳ, ದಸ್ತಗೀರ ಕಲಾದಗಿ, ತೌಷಿಫ್ ಗಿರಗಾಂವಿ, ರಾಚಯ್ಯ ಗಣಕುಮಾರ, ನಬೀಸಾಬ್ ಹೊನ್ಯಾಳ, ದಾದಾ ಗೂಗೀಹಾಳ, ಹಸನಸಾಬ ಚೌದ್ರಿ, ಬಾಷಾಸಾಬ ಶಿರೂರ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಸುಧಾರಣಾ ಮಂಡಳಿ ಸದಸ್ಯರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net