

ಕಂಪ್ಲಿ: ಮಕ್ಕಳಿಗೆ ವಾಸ್ತವಿಕದೊಂದಿಗೆ ಕಾಲ್ಪನಿಕ ಕತೆಗಳನ್ನೂ ಹೇಳುವ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ.ಶಿವಲಿಂಗಪ್ಪ ಹಂದಿಹಾಳು ಹೇಳಿದರು.
ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ಕೃತಿ ನೋಟುಬುಕ್ ಕುರಿತು ಆಯೋಜಿಸಿದ್ದ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ, ಸಂಶೋಧನಾರ್ಥಿ ಬೇರ‌್ಗಿ ಜಯಶ್ರೀ ಅವರ ವೈಜ್ಞಾನಿಕ ಯುಗದಲ್ಲೂ ಮಕ್ಕಳಿಗೆ ಚಂದಮಾಮನ ಕಾಲ್ಪನಿಕ ಕತೆ ಹೇಳಿ ರಮಿಸಬೇಕೆ ? ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ ಕತೆಗಳ ಅಗತ್ಯವಿಲ್ಲವೆ ? ಎಂಬ ಪ್ರಶ್ನೆಗೆ ಉತ್ತರಿಸಿದರು.
ಗಂಗಾವತಿಯ ಮಕ್ಕಳ ಸಾಹಿತಿ ಸುರೇಶ್ ಜಿ.ಎಸ್.ಕಲಾಪ್ರಿಯ ಸಂವಾದಕ್ಕೆ ಚಾಲನೆ ನೀಡಿ, ಪ್ರಶಸ್ತಿ ಪಡೆದಿದ್ದಕ್ಕೆ ಖುಷಿ ಮತ್ತು ಭಾವನೆ ಕುರಿತು ಪ್ರಶ್ನಿಸಿದರು. ಕೆ.ಶಿವಲಿಂಗಪ್ಪ ಹಂದಿಹಾಳು ಪ್ರತಿಕ್ರಿಯಿಸಿ, ನನಗಿಂತ ಹಿರಿಯರಿಗೆ ದೊರಕದ ಪ್ರಶಸ್ತಿ ನನಗೆ ದೊರೆತಿದ್ದು ಜವಾಬ್ದಾರಿ ಹೆಚ್ಚಿಸಿದೆ. ಶಾಲೆ ಬಿಟ್ಟ, ಅನೌಪಚಾರಿಕ ಶಿಕ್ಷಣ ಪಡೆವ ಮಕ್ಕಳಲ್ಲಿ ಸೃಜನಶೀಲತೆ ಹೆಪ್ಪುಗಟ್ಟಿದ್ದು, ಸೂಕ್ತ ವೇದಿಕೆ ಒದಗಿಸುವ ಕೆಲಸವಾಗಬೇಕು. ವಿಜ್ಞಾನ ಚಲನಶೀಲವಾಗಿದ್ದು, ಭವಿಷ್ಯದಲ್ಲಿನ ಸಾಧ್ಯತೆಗಳನ್ನು ಕೃತಿ ಎತ್ತಿ ಹಿಡಿಯುತ್ತದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ನಕರಾತ್ಮಕ ಚಿಂತನೆಗಳು ಸಹಾಯಕವಾಗಬಲ್ಲವು. ಮಕ್ಕಳ ಸಾಹಿತ್ಯ ಹುಲುಸಾಗಿ ಬೆಳೆಯಬೇಕಿದ್ದು, ಮಕ್ಕಳ ಸಾಹಿತ್ಯ ಕೃಷಿಗೆ ಹೆಚ್ಚಿನ ಅವಕಾಶವಿದೆ ಎಂದು ಉತ್ತರಿಸಿದರು.
ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳಲ್ಲಿ ಓದುವ ಮನೋಭಾವ ಬೆಳೆಸುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಿದೆ ಎಂದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಓದು, ಬರಹ, ತಿಳಿವಳಿಕೆ ನೀಡುವಲ್ಲಿ ಶಿಕ್ಷಕರು ಅಹರ್ನಿಶಿ ಶ್ರಮಿಸಬೇಕಿದೆ ಎಂದರು.
ಸಂವಾದದಲ್ಲಿ ಡಾ.ಎಸ್.ಎಂ.ಸಾವಿತ್ರಿ, ಡಾ.ಬಿ.ಸುನೀಲ್, ಚಂದ್ರಯ್ಯ ಸೊಪ್ಪಿಮಠ, ರಾಜು ಬಿಲಂಕರ್, ವೀರಮ್ಮ ನಾಗರಾಜ, ಮುದುಕಪ್ಪ ನೆಲಜೇರಿ, ಶಂಕರಮೂರ್ತಿ, ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.