

ನೆಲಮಂಗಲ: ಮಕ್ಕಳ ಸರ್ವತೋಮುಖ ಬೆಳವಣಿಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ನೆಲಮಂಗಲ ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ನಗರದ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಗುರುವಾರ ಗ್ರಾಮಾಂತರ ಜಿಲ್ಲಾ ಮಕ್ಕಳ ಸಹಾಯವಾಣಿ ಸಂಸ್ಥೆ ಆಯೋಜಿಸಿದ್ದ ಚೈಲ್ಡ್ ಲೈನ್ ದೋಸ್ತಿ ವೀಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಅಭಿವೃದ್ಧಿಗೆ ಸರ್ಕಾರ ಹಲವಾರು ಕಾರ್ಯಕ್ರಮ ರೂಪಿಸಿದೆ. ಮಕ್ಕಳಿಗೆ ವಿಶೇಷ ಹಕ್ಕುಗಳಿದ್ದು, ಅವುಗಳ ರಕ್ಷಣೆಯಾಗಬೇಕು. ಮಕ್ಕಳ ರಕ್ಷಣೆ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳು ದೈವ ಸಮಾನ. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಜತೆಗೆ ಮಾನವೀಯ ಮೌಲ್ಯ ಕಲಿಸಬೇಕು. ಪಠ್ಯಶಿಕ್ಷಣದೊಂದಿಗೆ ಕಲೆ, ಸಂಸ್ಕೃತಿ, ಕ್ರೀಡೆ, ಇನ್ನಿತರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಕ್ಕಳಲ್ಲಿರುವ ಕೌಶಲ ಮತ್ತು ಪ್ರತಿಭೆ ಪ್ರೋತ್ಸಾಹಿಸಬೇಕು ಎಂದರು.
ಇತ್ತೀಚೆಗೆ ಕೆಲ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ತೊಡಗಿಸಿಕೊಂಡಿದ್ದು, ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವುದು ಬೇಸರದ ಸಂಗತಿ ಎಂದರು.
ಸ್ವಾಂತತ್ರ್ಯ ಬಂದು 75 ವರ್ಷವಾದರೂ ಮಕ್ಕಳು ಇಂದಿಗೂ ಹಲವಾರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳ ಸರ್ವಾಂಗೀಣ ಬೆಳವಣಗೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ನಿಗಾವಹಿಸಿ ಸೂಕ್ತಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನಾಗಿ ನಿರ್ಮಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮುಜ್ಯೋಗಿಹಳ್ಳಿ ಮಾಹಿತಿ ನೀಡಿದ್ದಾರೆ.
ಮಕ್ಕಳು ಯಾವುದೇ ಸಂದರ್ಭದಲ್ಲೂ ಸಂಕಷ್ಟಕ್ಕೆ ಸಿಲುಕಿದಾಗ ಮಕ್ಕಳ ಸಹಾಯವಾಣಿಗೆ ಸಂಪರ್ಕಿಸಬೇಕು ಎಂದರು.
ಚೈಲ್ಡ್ ಲೈನ್ ದೋಸ್ತಿ ವೀಕ್ ಪೊಸ್ಟರ್ ಬಿಡುಗಡೆ ಮಾಡಲಾಯಿತು. ಸಿಂಚನಾ ಕಲಾ ಕೇಂದ್ರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಿ.ಎಚ್.ಸಿದ್ಧಯ್ಯ ಮತ್ತು ತಂಡದರು ಮಕ್ಕಳ ಜಾಗೃತಿ ಗೀತಗಾಯನ ನಡೆಸಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನರಸಿಂಹಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಯೋಜನಾಧಿಕಾರಿ ಲತಾ, ಮೇಲ್ವಿಚಾರಕಿ ಪುಷ್ಪಾ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಮಂಜುನಾಥ್, ತಾಲೂಕು ಸಂಯೋಜಕರಾದ ದಿನೇಶ್, ಮುರಳಿ, ಶ್ರೀನಿವಾಸ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕಾರ್ಯಕ್ರಮಾಧಿಕಾರಿ ಸಣ್ಣಕರಿಯಪ್ಪ ಮತ್ತಿತರರು ಇದ್ದರು.