

ಚನ್ನರಾಯಪಟ್ಟಣ: ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಜತೆಗೆ ವ್ಯವಹಾರ ಜ್ಞಾನ ಅಗತ್ಯ ಎಂದು ಎಚ್‌ಪಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಧರ್ಮೇಶ್ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದ ಎಚ್‌ಪಿಜಿಎಸ್ ಶಾಲೆಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯವಹಾರಿಕ ಜ್ಞಾನ ಇಲ್ಲದಿದ್ದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂದರು.
ಸರ್ಕಾರಿ ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಪಡೆಯುವುದಕ್ಕಿಂತ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಪಡೆದುಕೊಳ್ಳುವ ಸಲುವಾಗಿ ಶಿಕ್ಷಣವನ್ನು ದೀಕ್ಷೆಯಾಗಿ ಸ್ವೀಕರಿಸಬೇಕು. ವ್ಯಾಪಾರ ಕ್ಷೇತ್ರ ದೇಶದ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.
ಮಕ್ಕಳ ಸಂತೆಯಲ್ಲಿ ನಾಟಿ ಕೊಳಿ, ಬಟ್ಟೆ, ಕಸ ಗುಡಿಸುವ ಕಡ್ಡಿ ಪೊರಕೆ, ಬೆಣ್ಣೆ ಹಾಗೂ ವಿವಿಧ ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಮಾರಾಟ ಮಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆಯುವ ತರಕಾರಿ, ಕೊಬ್ಬರಿ, ತೆಂಗಿನ ಕಾಯಿ ಮತ್ತಿತರ ದಿನಸಿ ಪದಾರ್ಥಗಳ ವ್ಯಾಪಾರ ನಡೆಸಿದರು.
ಕೆಲ ವಿದ್ಯಾರ್ಥಿನಿಯರು ತಿಂಡಿಗಳನ್ನು ತಯಾರಿಸಿ ಸ್ಥಳದಲ್ಲೇ ಮಾರಾಟ ಮಾಡಿದರು. ವರ್ತಕರ ಮಕ್ಕಳು ದಿನಸಿ, ಬಟ್ಟೆ ಸೇರಿ ಇತರೆ ಅಂಗಡಿಗಳನ್ನು ಇಟ್ಟಿದ್ದರು. ಸಾರ್ವಜನಿಕರು ಖುಷಿಯಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದ ವರಗೆ ವ್ಯಾಪಾರ ಜೋರಾಗಿಯೇ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ತೇಜೇಶ್, ಸದಸ್ಯರು, ಸಹ ಶಿಕ್ಷಕರ ವೃಂದ, ಪಾಲಕರು ಹಾಗೂ ಇತರರು ಇದ್ದರು.