

ಎನ್.ಆರ್.ಪುರ: ಮಲೆನಾಡು ಭಾಗದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಸರ್ಕಾರ ಆ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದು ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಹೇಳಿದರು.
ಬುಧವಾರ ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಹಾಗೂ ಶೆಟ್ಟಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡು ಭಾಗದ ಸರ್ಕಾರಿ ಶಾಲೆಯಲ್ಲಿ ಒಂದು ಮಗು ಬರುತ್ತಿದ್ದರೂ ಅದನ್ನು ಮುಚ್ಚದೆ ಶಾಲೆ ನಡೆಸಬೇಕು. ಈ ಭಾಗದ ಗ್ರಾಮಗಳಲ್ಲಿರುವ ಮನೆಗಳ ಸಂಖ್ಯೆಯೇ ಕಡಿಮೆ. ಬಯಲು ಸೀಮೆಗೂ ಮಲೆನಾಡಿಗೂ ಬಹಳ ವ್ಯತ್ಯಾಸವಿದೆ. ಸರ್ಕಾರಿ ಶಾಲೆ ಮುಚ್ಚದೆ ಉಳಿಸಿಕೊಂಡರೆ ನಂತರದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಬಹುದು. ಈ ಸಮಸ್ಯೆ ಬಗ್ಗೆ ಮಲೆನಾಡು ಭಾಗದ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ. ಇದರಲ್ಲಿ ಗ್ರಾಮದ ಪ್ರತಿಯೊಬ್ಬರ ಶ್ರಮವಿದೆ. ಮಕ್ಕಳಿಗೆ ಶಿಕ್ಷಣದ ಜತೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ ಎಲ್ಲವೂ ಬೇಕಾಗುತ್ತದೆ. ಪ್ರತಿಭೆ ಹೊರತರಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶಾಲೆಗೆ ಜಾಗ ದಾನವಾಗಿ ನೀಡಿದ್ದ ಸೂರ್ಯನಾರಾಯಣ ಭಟ್, ಶ್ರೀಧರ್ ಭಟ್, ನಾಗರಾಜ್ ಭಟ್, ರಂಗಮಂದಿರಕ್ಕೆ ಜಾಗ ದಾನ ನೀಡಿದ ಕಣಿವೆ ಡಾ. ನವೀನ್ ನಾಗರಾಜ್, ಕಣಿವೆ ವಿನಯ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಕಂಡ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ್ದ ಗ್ರಾಮದ ಮುಖಂಡರನ್ನು ಅಭಿನಂದಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುತ್ತಳಿಕೆ ಕೇಶವ ಮತ್ತು ತಂಡದವರಿಂದ ಹಾಸ್ಯ ಸಂಜೆ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಶೇಖರ್, ಮುತ್ತಿನಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಕೆ.ಎಸ್.ಪದ್ಮನಾಭ, ಸದಸ್ಯೆ ಅರ್ಪಿತಾ, ಕೆ.ವಿ.ವಿಜೇಂದ್ರ, ಕೆ.ಎನ್.ಪ್ರಫುಲ್ಲ, ಬಿ.ನಂಜುಂಡಪ್ಪ, ಅಶೋಕ್, ಚನ್ನಪ್ಪ, ಸಿ.ಆರ್.ಪಿ.ತಿಮ್ಮಮ್ಮ ಇತರರಿದ್ದರು.