

ಕೊಳ್ಳೇಗಾಲ: ಶಿಕ್ಷಕರ ಜತೆ ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ನಿರತರಾಗಬೇಕು ಎಂದು ವಿಸ್ಡಮ್ ಶಾಲೆಯ ಕಾರ್ಯದರ್ಶಿ ಮಧು ಮಲ್ಲೇಶ್ ಹೇಳಿದರು.
ಪಟ್ಟಣದ ವಿಸ್ಡಮ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪಾಲಕರ ಅಭಿಯಾನ ಹಾಗೂ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಲಕರು ಮಕ್ಕಳಿಗೆ ಹೆಚ್ಚು ಸಮಯವನ್ನು ನೀಡಬೇಕು. ಮೊಬೈಲ್ ಬಳಸುವುದಕ್ಕೆ ಕಡಿವಾಣ ಹಾಕಬೇಕು. ಶಾಲೆಯಲ್ಲಿ ಮಕ್ಕಳು ಕೇಳಿದ ಪಾಠ-ಪ್ರವಚನವನ್ನು ಅಭ್ಯಾಸ ಮಾಡಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಇದರಿಂದ ಪಾಠಗಳು ಮಕ್ಕಳ ನೆನಪಿನಲ್ಲಿ ಉಳಿಯಲು ಸಹಕಾರಿಯಾಗಲಿದೆ. ಈ ವರ್ಷದಿಂದ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕಲಿಸಲು ಸಂಕಲ್ಪ್ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಿದ್ದೇವೆ ಎಂದರು.
21ನೇ ಶತಮಾನದ ಕೌಶಲದ ಮಹತ್ವ, ವಿಮರ್ಶಾತ್ಮಕ ಚಿಂತನೆ, ಸಾಮಾಜಿಕ ಜವಾಬ್ದಾರಿಗಳು, ನಾಯಕತ್ವದ ಕೌಶಲ, ಲೀಡ್ ಮತ್ತು ಸಂಕಲ್ಪ್ ವಿಷಯದ ಬಗ್ಗೆ ಸವಿಸ್ತರವಾಗಿ ಮಾತನಾಡಿದರು.
ಇಂಗ್ಲಿಷ್ ಕಲಿಕೆಗೆ ಸಂಕಲ್ಪ್ :
ಶಾಲಾ ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಕಲೆಯನ್ನು ಹೆಚ್ಚಿಸಲು ಸಂಕಲ್ಪ್ ಕಾರ್ಯಕ್ರಮದಡಿ ಮಕ್ಕಳ ನಡುವೆ ಕೆಲವು ಚರ್ಚೆಗಳನ್ನು ಇಡಲಾಯಿತು. ಪ್ರಸ್ತುತಿ ವಿಷಯದಲ್ಲಿ ಶಿಸ್ತು, ಗೌರವ, ಕಠಿಣ ಪರಿಶ್ರಮ, ಶಿಕ್ಷಣದ ಪ್ರಾಮುಖ್ಯತೆ ಹಾಗೂ ಸಮಯದ ಮಹತ್ವವನ್ನು ತಿಳಿಸಲಾಯಿತು. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ, ಇತಿಹಾಸ ಮತ್ತು ಸಂಸ್ಕೃತಿ, ಆರೋಗ್ಯ ಮತ್ತು ಕ್ಷೇಮ, ಕಲೆ ಅತ್ಯಗತ್ಯ, ಬರವಣೆಗೆ ಪ್ರಾಮುಖ್ಯತೆ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿತ್ತು. ಪುರುಷರಿಗಿಂತ ಮಹಿಳೆಯರು ಬಲಶಾಲಿಗಳಾ? ವಿಡಿಯೋ ಗೇಮ್ಸ್ ಹಾನಿಕಾರಕ ಅಥವಾ ಸಹಾಯಕ, ಪೇಪರ್ ಬುಕ್ಸ್ ಅಥವಾ ಇ-ಬುಕ್ಸ್, ಹೆಚ್ಚು ಸಾರ್ವಜನಿಕರ ಹಸಿರು ಸ್ಥಳ ಹಾಗೂ ಆಟದ ಮೈದಾನ, ಸಾಮಾಜಿಕ ಮಾಧ್ಯಮ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆಯೇ? ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಇದರಲ್ಲಿ ಎಲ್ಲ ಮಕ್ಕಳು ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಕ್ಕೆ ಪಾಲಕರು ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲೆ ನಯನಾ ಕ್ಲ್ಯಾರಿಬಲ್, ಬೋಧಕ, ಬೋಧಕೇತರ ಸಿಬ್ಬಂದಿ, ಪಾಲಕರು ಇದ್ದರು.