

ಬಸವಕಲ್ಯಾಣ: ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪಾಲಕರು ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಶುಭ ಮಂಗಲ ಫಂಕ್ಷನ ಹಾಲ್‌ನಲ್ಲಿ ತಾಲೂಕು ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾವಂತರಿಗೆ ಸನ್ಮಾನಿಸಿ ಪ್ರೋತ್ಸಾಹಿಸುವುದು ಅವಶ್ಯಕ ಎಂದು ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ. ಬಂಜಾರಾ ಸಮಾಜದ ಸಮುದಾಯ ಭವನಕ್ಕಾಗಿ ಐದು ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ವಿಶೇಷ ಉಪನ್ಯಾಸ ನೀಡಿ, ಉನ್ನತ ಗುರಿ, ಧನಾತ್ಮಕ ಚಿಂತನೆ ಅವಶ್ಯಕ. ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ತಂದೆ-ತಾಯಿ ಕನಸು ಸಾಕಾರ ಮಾಡಲು ಶ್ರಮ ವಹಿಸಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಡಾ.ಬಾಲಕೃಷ್ಣ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಹುಮನಾಬಾದ್ ಪಿಎಸ್‌ಐ ಸುರೇಶ ಚವ್ಹಾಣ್ ಮಾತನಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಬಾಬುಹೊನ್ನಾ ನಾಯಕ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಜಿಪಂ ಮಾಜಿ ಸದಸ್ಯರಾದ ಧನಸಿಂಗ್ ರಾಠೋಡ್, ಬೀದರ್ ವಾಣಿಜ್ಯ ತೆರಿಗೆ ಆಯುಕ್ತ ಶಾಂತಕುಮಾರ ರಾಠೋಡ್, ಭಾಲ್ಕಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ್, ಹುಮನಾಬಾದ್ ತಾಲೂಕಿನ ಅಕ್ಷರ ದಾಸೋಹ ಅಧಿಕಾರಿ ಪ್ರೀತಮಸಿಂಗ್ ಜಾಧವ, ಮುಖ್ಯ ಗುರು ಝರನಾಥ ರಾಠೋಡ್, ಡಾ.ದೀಪಕ ಜಾಧವ, ಎಇ ಗೋವರ್ಧನ್ ಚವ್ಹಾಣ್, ಜೆಸ್ಕಾಂ ಎಇ ಸತೀಶ ಜಾಧವ, ಎಇ ಚಂದ್ರಕಾಂತ ಚವ್ಹಾಣ್, ಪಿಡಿಒ ರಮೇಶ ರಾಠೋಡ್, ಅಶೋಕ ರಾಠೋಡ್, ಅಶೋಕ ಜಾಧವ, ಪ್ರಾಚಾರ್ಯ ರಾಜಕುಮಾರ್ ಜಾಧವ, ಶ್ರಾವಣ ಪವಾರ್, ವಿನೋದ ರಾಠೋಡ್, ಜಯರಾಜ ರಾಠೋಡ್, ಗುರುನಾಥ ಜಾಧವ, ಆನಂದ ಜಾಧವ, ಸಂಜು ಜಾಧವ, ಸಂದೀಪ ಜಾಧವ, ಅಮಿತ ಚವ್ಹಾಣ್, ಸುನೀಲ ಜಾಧವ, ಪ್ರಕಾಶ ಜಾಧವ ಇದ್ದರು.
ಭಾಲ್ಕಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ್ ಸ್ವಾಗತಿಸಿದರು. ಶಿವರಾಮ ಚವ್ಹಾಣ್ ನಿರೂಪಣೆ ಮಾಡಿದರು. ಶಾಮ ಚವ್ಹಾಣ ವಂದಿಸಿದರು.