

ನರಗುಂದ: ಕರೊನಾ ಹೆಮ್ಮಾರಿ ಹರಡಿರುವ ಈ ಸಂದರ್ಭದಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಮಾನವೀಯತೆ ದೂರಾಗುತ್ತಿರುವುದು ಕಂಡುಬರುತ್ತಿದೆ. ಆದರೆ, ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ ಜರುಗಿದ ಮನಕಲುಕುವ ಘಟನೆಯೊಂದು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಸಾರಿ ಹೇಳುವಂತಿದೆ.
ರಡ್ಡೇರನಾಗನೂರ ಗ್ರಾಮದ ಕಸ್ತೂರೆವ್ವ ತನ್ನ ಮಾಂಗಲ್ಯಸರವನ್ನು ಅಡವಿಟ್ಟು, ಮಕ್ಕಳ ಆನ್ಲೈನ್ ವಿದ್ಯಾಭ್ಯಾಸಕ್ಕಾಗಿ ಟಿವಿ ಖರೀದಿಸಿದ್ದಾಳೆ. ಆದರೆ, ಸರ ಅಡವಿಟ್ಟುಕೊಂಡ ವ್ಯಕ್ತಿಗೆ ಈ ವಿಷಯ ಗೊತ್ತಾಗಿದೆ. ತಕ್ಷಣವೇ ಆತ ಸರವನ್ನು ವಾಪಸ್ ನೀಡಿದ್ದಾನೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕಾಗಿ 20 ಸಾವಿರ ರೂಪಾಯಿಗಳ ನೆರವನ್ನು ಕೂಡ ನೀಡಿದ್ದಾನೆ.
ರಡ್ಡೇರನಾಗನೂರ ಗ್ರಾಮದ ಕಸ್ತೂರೆವ್ವ ಮುತ್ತಪ್ಪ ಚಲವಾದಿ (42 ವರ್ಷ) ಅವರದು ಬಡಕುಟುಂಬ. ಕಸ್ತೂರೆವ್ವ, ಮುತ್ತಪ್ಪ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಸೇರಿ 4 ಮಕ್ಕಳಿದ್ದಾರೆ. ಮುತ್ತಪ್ಪ ಕೂಲಿ ಕೆಲಸ ಮಾಡುತ್ತಾರೆ. ಅಲ್ಲದೆ, ಹೈನುಗಾರಿಕೆ ಕೂಡ ಇದೆ. ಹಿರಿಯ ಪುತ್ರಿ ಕಾವೇರಿಯ ಮದುವೆ ಮಾಡಿದ್ದಾರೆ. ಇದಕ್ಕಾಗಿ ತಮಗಿರುವ 2 ಎಕರೆ ಸ್ವಂತ ಜಮೀನಿನ ಮೇಲೆ ಈಗಾಗಲೇ 1 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಎರಡನೇ ಮಗಳು ಸುಧಾ ಪಿಯುಸಿ ಓದುತ್ತಿದ್ದಾಳೆ. 3ನೇ ಮಗಳು ಸುರೇಖಾ ಹಾಗೂ ಮಗ ಅಭಿಷೇಕನ ಆನ್ಲೈನ್ ಶಿಕ್ಷಣಕ್ಕಾಗಿ ಈಗ ಟಿವಿ ಖರೀದಿಸಿದ್ದಾರೆ.
ರಡ್ಡೇರ ನಾಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುರೇಖಾ 9ನೇ ತರಗತಿ ಓದುತ್ತಿದ್ದರೆ, ಮಗ ಅಭಿಷೇಕ 7ನೇ ತರಗತಿ ಓದುತ್ತಿದ್ದಾನೆ. ಲಾಕ್ಡೌನ್ ಸಡಿಲಿಕೆಯಾದ ನಂತರ ಆನ್ಲೈನ್ ಪಾಠಗಳನ್ನು ಆರಂಭಿಸಲಾಗಿದೆ. ನಿತ್ಯ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ವೀಕ್ಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, ಇವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಾಠ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಪಾಠದ ವಿಷಯವಾಗಿ ಶಿಕ್ಷಕರು ಕರೆ ಮಾಡಿ ಕೇಳಿದ ಪ್ರಶ್ನೆಗೆ ಮಕ್ಕಳ ಬಳಿ ಉತ್ತರವಿರುತ್ತಿರಲಿಲ್ಲ.
ಮಕ್ಕಳ ಪರಿಸ್ಥಿತಿ ಅರಿತ ತಾಯಿ ಕಸ್ತೂರೆವ್ವ ಏನಾದರೂ ಮಾಡಿ ಟಿವಿ ಖರೀದಿಸಲು ನಾನಾ ಪ್ರಯತ್ನಗಳನ್ನು ಮಾಡಿದ್ದಾರೆ. ಗದಗ ನಗರದ ವ್ಯಕ್ತಿಯೊಬ್ಬರಲ್ಲಿ ಮಾಂಗಲ್ಯ ಸರ ಅಡವಿಟ್ಟು ಟಿವಿ ತಂದು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಕಷ್ಟ ಕಾಲದಲ್ಲಿ ತಮ್ಮ ತಾಯಿ ಟಿವಿ ತಂದು ಕೊಟ್ಟಿದ್ದಕ್ಕೆ ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ.
ಸರ ಅಡವಿಟ್ಟುಕೊಂಡ ವ್ಯಕ್ತಿಗೆ ಈ ವಿಷಯ ಗೊತ್ತಗಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ತನ್ನ ತಾಳಿಯನ್ನೇ ಒತ್ತೆ ಇಟ್ಟದ್ದನ್ನು ಕಂಡು ಮರುಗಿದ್ದಾನೆ. ತಕ್ಷಣವೇ ಸರವನ್ನು ವಾಪಸು ಮಾಡಿ ಮಾನವೀಯತೆ ಮೆರೆದಿದ್ದಾನೆ. ಜತೆಗೆ, 20 ಸಾವಿರ ರೂಪಾಯಿಗಳ ಹಣಕಾಸು ನೆರವನ್ನು ನೀಡಿ, ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವಂತೆ ತಿಳಿಸಿದ್ದಾನೆ. ಅಲ್ಲದೆ, ತನ್ನ ಹೆಸರನ್ನು ಬಹಿರಂಗಪಡಿಸದೆ, ಗುಪ್ತ ದಾನಿಯಾಗಿಯೇ ಉಳಿದುಕೊಂಡಿದ್ದಾನೆ.
ಈ ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಕೂಡ ತಮ್ಮ ಆಪ್ತರ ಮೂಲಕ 20 ಸಾವಿರ ರೂಪಾಯಿಯ ಚೆಕ್ ಅನ್ನು ಕಸ್ತೂರೆವ್ವ ಕುಟುಂಬಕ್ಕೆ ನೀಡಿದ್ದಾರೆ.
ನಮ್ಮ ಮನೆಯಲ್ಲಿದ್ದ ಹಳೆಯ ಟಿವಿ ಸಂಪೂರ್ಣ ಕೆಟ್ಟು ಹೋಗಿದೆ. ಹೀಗಾಗಿ, ಆನ್ಲೈನ್ ಪಾಠಕ್ಕಾಗಿ ನಮ್ಮಿಬ್ಬರು ಮಕ್ಕಳು ಪಕ್ಕದ ಮನೆಗಳಿಗೆ ಅಲೆದಾಡುವಂತಾಗಿತ್ತು. ಮಗಳ ಮದುವೆಗೆ ಈಗಾಗಲೇ ಕೈಗಡ ಮತ್ತು ಬ್ಯಾಂಕ್ವೊಂದರಲ್ಲಿ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದೇವೆ. ಈಗ ಮತ್ತೆ ಸಾಲ ಕೇಳುವುದು ಸರಿಯಲ್ಲ ಎಂದು ನನ್ನ ತಾಳಿ ಸರ ಅಡವಿಟ್ಟು ಟಿವಿ ತಂದಿದ್ದೇನೆ.| ಕಸ್ತೂರೆವ್ವ ಚಲವಾದಿ
ಇಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ತಮ್ಮ ಮಾಂಗಲ್ಯವನ್ನೇ ಅಡವಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಡವಿಟ್ಟಿರುವ ತಾಳಿ ಬಿಡಿಸಿಕೊಡುತ್ತೇನೆ. ಆನ್ಲೈನ್ ಪಾಠಕ್ಕೆಂದು ಖರೀದಿಸಿರುವ ಟಿವಿಯ ಮೊತ್ತವನ್ನು ಆ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ನೀಡುತ್ತೇನೆ.| ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ