ಮಕ್ಕಳ ವ್ಯಾಕ್ಸಿನ್‌ಗೆ ಪಾಲಕರ ಸಹಕಾರ ಅತ್ಯಗತ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮನವಿ, ಹೊಸಕೋಟೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ

1
Published on

ಬೆಂಗಳೂರು ಗ್ರಾಮಾಂತರ: ಮಕ್ಕಳನ್ನೇ ಹೆಚ್ಚು ಬಾಧಿಸಲಿದೆ ಎನ್ನಲಾದ ಕರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದೆ, ಈ ನಿಟ್ಟಿನಲ್ಲಿ ಮಕ್ಕಳು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವಂತೆ ಪಾಲಕರು ಸಹಕರಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ನಗರಸಭೆ ವತಿಯಿಂದ ಬುಧವಾರ ಹೊಸಕೋಟೆ ತಾಲೂಕಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ಲಸಿಕೆ ಪಡೆಯುವಲ್ಲಿ ಕೆಲವು ಕಡೆಗಳಲ್ಲಿ ದೊಡ್ಡವರೇ ಹಿಂದೇಟು ಹಾಕುತ್ತಿರುವ ಪ್ರಸಂಗಗಳು ಕೇಳಿಬರುತ್ತಿವೆ. ಏತನ್ಮಧ್ಯೆ ಮಕ್ಕಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದು ಸಂತಸದ ವಿಷಯ. ನಾಳಿನ ಭವಿಷ್ಯದ ಪ್ರಜೆಗಳಾದ ಮಕ್ಕಳು ಸರ್ಕಾರದ ಕಾರ್ಯಕ್ಕೆ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯ. ಪಾಲಕರು ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಕರೆ ನೀಡಿದರು.

ಪ್ರಜೆಗಳೇ ಪ್ರಭುಗಳು: ರಾಜಕಾರಣದಲ್ಲಿ ಸುಮಾರು 40 ವರ್ಷದ ಅನುಭವವಿದೆ, ಸಾಮಾನ್ಯ ಕಾರ್ಯಕರ್ತನಾಗಿ ನಗರಸಭೆ ಪ್ರವೇಶಿಸುವ ಮೂಲಕ ಮೂರು ಬಾರಿ ಶಾಸಕನಾಗಿ ಎರಡು ಬಾರಿ ಸಚಿವನಾಗಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ, ಇಂಥ ಅವಕಾಶವನ್ನು ಪ್ರಜೆಗಳಿಗಾಗಿ ಮೀಸಲಿಟ್ಟಿದ್ದೇನೆ ಎಂದು ಸಚಿವರು ಭಾವುಕರಾದರು.

ಅಂಬೇಡ್ಕರ್ ಸಂವಿಧಾನದ ಆಶಯದಂತೆ ರಾಜಕಾರಣಿಗಳು ನಡೆದುಕೊಂಡರೇ ದೇಶ ಸುಭಿಕ್ಷವಾಗಿರುವುದರಲ್ಲಿ ಅನುಮಾನವಿಲ್ಲ, ರಾಜಕಾರಣದಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ನೀಡಬಾರದು, ಪ್ರಜೆಗಳು ನೀಡಿದ ಅವಕಾಶವನ್ನು ಪ್ರಜೆಗಳಿಗಾಗಿಯೇ ಮೀಸಲಿಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಸಾಮಾನ್ಯ ಪ್ರಜೆಗೆ ಸಂವಿಧಾನದಲ್ಲಿ ಪ್ರಭುಗಳ ಸ್ಥಾನ ಸಿಗುತ್ತದೆ, ಪ್ರಭುವಾದ ಬಳಿಕ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎಂದರು.

ಮಕ್ಕಳೊಂದಿಗೆ ಮಕ್ಕಳಾದ ಸಚಿವ: ವ್ಯಾಕ್ಸಿನ್ ಪಡೆದ ಮಕ್ಕಳಿಗೆ ಸಿಹಿಹಂಚಿ ಅವರ ಉಭಯಕುಶಲೋಪರಿ ವಿಚಾರಿಸಿದ ಸಚಿವರು, ಕೆಲಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಗಮನ ಸೆಳೆದರು. ಏನಪ್ಪ ಹೇಗೆ ಓದುತ್ತಿದ್ದೀಯಾ, ಮನೆಕಡೆ ಎಲ್ಲರೂ ಚೆನ್ನಾಗಿದ್ದಾರಾ, ಏನಮ್ಮ ಅಪ್ಪಅಮ್ಮ ಹೇಗಿದ್ದಾರೆ, ಅವರೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರಾ, ಹಾಕಿಸಿಕೊಳ್ಳದಿದ್ದರೇ ನೀವೇ ಅರಿವು ಮೂಡಿಸಿ ಅವರಿಗೆ ಲಸಿಕೆ ಹಾಕಿಸಬೇಕು. ಇದು ನಿಮ್ಮ ಜವಾಬ್ದಾರಿಯೂ ಹೌದು ಎಂದ ಸಚಿವರು ಮಕ್ಕಳ ತಲೆನೇವರಿಸಿ ಭಾವನಾತ್ಮಕತೆ ತೋರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net