

ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ 133ನೇ ಗ್ರಂಥ ಪಾಲಕರ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಿಬಾಯಿ ಗಣೇಶ್‌ನಾಯಕ್ ಮಾತನಾಡಿ, ಅರಿವು ಕೇಂದ್ರಗಳಿಂದ ಗ್ರಾಮೀಣ ಮಕ್ಕಳಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಉನ್ನತ ವಿದ್ಯಾಭ್ಯಾಸ ಮಾಡಲು ಅರಿವು ಕೇಂದ್ರಗಳು ಸಹಕಾರಿಯಾಗುತ್ತಿವೆ. ಪುಣಜನೂರು ಗ್ರಾಮ ಪಂಚಾಯಿತಿಯು ಅತಿ ಹೆಚ್ಚು ಲಂಬಾಣಿ ಮತ್ತು ಗಿರಿಜನರನ್ನು ಹೊಂದಿದ್ದು, ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಸಂಘ-ಸಂಸ್ಥೆ ಗಳ ಜತೆಗೂಡಿ ಹರಿವು ಕೇಂದ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಸಂತೋಷಕರ ವಿಷಯ ಎಂದು ತಿಳಿಸಿದರು,
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಅರಿವು ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು ಮತ್ತು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಪುಸ್ತಕಗಳನ್ನು ಮತ್ತು ಪೀಠೋಪಕರಣಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಹೆಚ್ಚಾಗಿ ಅರಿವು ಕೇಂದ್ರಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇತ್ತೀಚೆಗೆ ಗ್ರಾಮ ಡಿಜಿ ವಿಕಾಸನ ಸಂಸ್ಥೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಮುಂತಾದ ಸಂಸ್ಥೆಗಳು ಮತ್ತು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಅರಿವು ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಿವು ಕೇಂದ್ರದ ಮೇಲ್ವಿಚಾರಕ ವೆಂಕಟೇಶ್ ಅವರನ್ನು ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ವಿ.ರತ್ನಾ, ಲೆಕ್ಕ ಸಹಾಯಕ ನಾಗೇಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ಸಿದ್ದರಾಜ, ಚಂದ್ರಶೇಖರ್, ಗಣೇಶ್‌ನಾಯಕ, ಮೇಲ್ವಿಚಾರಕ ವೆಂಕಟೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್, ಜಾಕಿರ್, ಶಿಕ್ಷಕರಾದ ಬಾಲು, ಮಲ್ಲಣ್ಣ, ಪ್ರೀತಿ, ನಗೀನಾ, ರಂಗಸ್ವಾಮಿ ನಾಯ್ಕ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.