

*ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಸಲಹೆ
*ಆರ್.ಟಿ.ಇ ಕಾಯ್ದೆ ಕುರಿತು ಕಾರ್ಯಾಗಾರ
ಚಾಮರಾಜನಗರ: ಸಮಾಜದಲ್ಲಿರುವ ಮಕ್ಕಳ ರಕ್ಷಣೆ ಪ್ರತಿಯೊಬ್ಬರು ಒತ್ತು ನೀಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ , ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಆರ್.ಟಿ.ಇ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಭೂಮಿಯಲ್ಲಿನ ಮಿನುಗುವ ನಕ್ಷತ್ರಗಳಿದ್ದಂತೆ. ಪ್ರಸ್ತುತ ಶಾಲೆ, ಮನೆ, ಸಮಾಜದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರು ಮಕ್ಕಳ ಪೋಷಣೆ ರಕ್ಷಣೆ ಬಗ್ಗೆ ಆದ್ಯತೆ ನೀಡಬೇಕಿದೆ ಎಂದರು.
ಮಕ್ಕಳು ಸಹಜವಾಗಿ ಬಾಲ್ಯ ಅನುಭವಿಸಲು ಅವಕಾಶ ಕೊಡಬೇಕು. ದಾವಂತದಲ್ಲಿ ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಲಾಗುತ್ತಿಲ್ಲ. ಅವರ ಮೇಲೆ ಯಾವುದೇ ಒತ್ತಡ ಹೇರದೆ ಪೂರ್ಣ ಪ್ರಮಾಣದಲ್ಲಿ ಸಾಮರ್ಥ್ಯ ಅಭಿವೃದ್ಧಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಮಕ್ಕಳ ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದ ಸಮಾಜದ ಅಭಿವೃದ್ದಿಯಾಗಲಿದೆ. ಮಕ್ಕಳ ರಕ್ಷಣೆ ಪೋಷಣೆ ಕುರಿತ ಕಾರ್ಯಕ್ರಮಗಳನ್ನು ದಕ್ಷತೆಯಿಂದ ಜಾರಿಗೊಳಿಸಬೇಕು. ಪರಿಣಾಮಕಾರಿಯಾಗಿ ಗುರಿ ತಲುಪಲು ಎಲ್ಲರು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಡಯಟ್ ಪ್ರಾಂಶುಪಾಲ ಕಾಶೀನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಚೆಲುವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಜಿ.ಆರ್.ದಿನೇಶ್, ಸಾಂಸ್ಥಿಕ ರಕ್ಷಣಾಧಿಕಾರಿ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್, ಸ್ವಯಂ ಸೇವಾ ಸಂಸ್ಥೆಯ ಗಂಗಾಧರ್, ಇತರರು ಉಪಸ್ಥಿತರಿದ್ದರು.