

ಕೊಪ್ಪಳ: ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆಗೆ ಎಲ್ಲ ಇಲಾಖೆಗಳ ಪಾಲ್ಗೊಳ್ಳುವಿಕೆ ಅಗತ್ಯ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗೀದಾರರೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾಲೋಚನಾ ಮತ್ತು ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಇಲಾಖೆ ಅಧಿಕಾರಿಗಳು ನಿಮ್ಮ ಇಲಾಖೆಯಿಂದ ಅನುಷ್ಠಾನವಾಗುವ ಯೋಜನೆಗಳ ಫಲಾನುಭವಿಗಳಿಗೆ ಮಕ್ಕಳ ಹಕ್ಕು ರಕ್ಷಣೆ ಅರಿವು ಮೂಡಿಸಿ. ಫಲಾನುಭವಿಗಳಿಂದ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿಸುವುದಿಲ್ಲ. ಭಾಗಿಯಾಗುವುದಿಲ್ಲ. ಆದಲ್ಲಿ ಸರ್ಕಾರದಿಂದ ಪಡೆದ ಸೌಲಭ್ಯ ವಾಪಸ್ ಪಡೆಯಿರಿ ಎಂದು ಒಪ್ಪಿಗೆ ಪತ್ರ ಪಡೆಯಿರಿ. ಸಾಮೂಹಿಕ ವಿವಾಹ ಆಯೋಜಕರು, ದೇವಸ್ಥಾನ ಮಂಡಳಿ, ಖಾಸಗಿ ಟ್ರಸ್ಟ್ ಅಥವಾ ವ್ಯಕ್ತಿ, ಸಂಘ ಸಂಸ್ಥೆಗಳು, ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿರಬೇಕು. ಸಾಮೂಹಿಕ ವಿವಾಹ ಆಯೋಜನೆಗೂ ಮುನ್ನಾ ತಹಸೀಲ್ದಾರ್ ಅನುಮತಿ ಪಡೆಯುವುದು ಕಡ್ಡಾಯ. ಕಲ್ಯಾಣ ಮಂಟಪ, ದೇವಾಲಯಗಳಲ್ಲಿ ಬಾಲ್ಯ ವಿವಾಹ ನಿಷೇಧ ಬಗ್ಗೆ ಶಾಶ್ವತ ಗೋಡೆ ಬರಹ ಬರೆಸವುಂತೆ ತಿಳಿಸಿದರು.
ವಸತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ 1098(ಸದ್ಯ 112) ಬಗ್ಗೆ ಗೋಡೆ ಬರಹ ಬರೆಸಿ. ಮಕ್ಕಳಿಗೆ ದೈಹಿಕ ಶಿಕ್ಷೆ ನಿಷೇಧಿಸಿ. ಮಕ್ಕಳ ಹಕ್ಕು ರಕ್ಷಣಾ ಕ್ಲಬ್ ರಚಿಸಿ. ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಕಾನೂನು ಜಾಗೃತಿ ಮೂಡಿಸಿ. ಬಾಲ ಕಾರ್ಮಿಕ ಪದ್ಧತಿ, ಕಿಶೋರರು ಮದ್ಯ ಹಾಗೂ ತಂಬಾಕು ಪದಾರ್ಥ ಬಳಕೆ, ಪೂರೈಕೆ ಮಾಡದಂತೆ ನೋಡಿಕೊಳ್ಳಿ. ಗ್ರಾಮ ಮಟ್ಟದಲ್ಲಿ ಮಹಿಳಾ, ಮಕ್ಕಳ ರಕ್ಷಣಾ ಕಾವಲು ಪಡೆ ರಚಿಸಿ. ಸರಕು ಸಾಗಣೆ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವುದನ್ನು ತಡೆಯಿರಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಮಾತನಾಡಿ, ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಪೊಕ್ಸೋ ಕಾಯ್ದೆ-2012 ಮತ್ತು ಮಕ್ಕಳ ರಕ್ಷಣಾ ನೀತಿ-2016ನ್ನು ಅನುಷ್ಠ್ಠಾನಗೊಳಿಸಿ. ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾನೂನುಗಳ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಮಂಜುನಾಥ., ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ನಿಲೋಫರ್ ರಾಂಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಇತರ ಅಧಿಕಾರಿಗಳಿದ್ದರು.