

ಹಾಸನ: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ. ಇದನ್ನು ತಡೆಗಟ್ಟಿ ಮಕ್ಕಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎನ್ ಇನವಳ್ಳಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ತೆರೆದ ಮನೆ ಕಾರ್ಯಕ್ರಮದಡಿ ಏರ್ಪಡಿಸಲಾಗಿದ್ದ ಪೋಕ್ಸೋ ಕಾಯ್ದೆ-2012 ರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೊಕ್ಸೋ ಕಾಯ್ದೆಯಡಿ ಶಾಲಾ ಶಿಕ್ಷಕರ ಮೇಲು ಪ್ರಕರಣ ದಾಖಲಾಗುತ್ತಿವೆ. ಅತ್ಯಂತ ಗೌರವಯುತವಾದ ಶಿಕ್ಷಕರ ಸ್ಥಾನದ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಅವರು ಉತ್ತಮ ನಡವಳಿಕೆಯಿಂದ ಯೋಗ್ಯತೆಯನ್ನು ಗಳಿಸಬೇಕು ಎಂದರು.
ಸಂಸ್ಕಾರ, ಆಚಾರ, ವಿಚಾರ ಸಂಬಂದಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ದೇಶದ ಭವಿಷ್ಯದ ಪ್ರಜೆಗಳನ್ನು ಉತ್ತಮ ರೀತಿಯಲ್ಲಿ ತಯಾರು ಮಾಡಬೇಕು ಎಂದ ಅವರು ಅಧಿಕಾರಿಗಳು ಮತ್ತು ಸಮಾಜ ಮಕ್ಕಳಿಗೆ ಕನ್ನಡಿಯಿದ್ದಂತೆ, ಈ ನಿಟ್ಟಿಲ್ಲಿ ತಮ್ಮ ನಡೆತೆಯಿಂದ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ, ತಾಯಿ ಮತ್ತು ಗುರುಗಳು ಇವರನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ಅವರು ಮಾತನಾಡಿ, ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರಲ್ಲದೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು.
ಶಾಲಾ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಿಂದ ಮುಕ್ತವಾಗಿ ಚರ್ಚೆ ಮಾಡುವುದು ತೆರೆದ ಮನೆ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ಇವುಗಳನ್ನು ತಡೆಗಟ್ಟಲು ವಿಶೇಷ ಮಕ್ಕಳ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದರು. 500 ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ತಿಳಿಸಿದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ಪ್ರಕರಣಗಳಿಗೆ ಪೊಕ್ಸೊ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲು ಅಧಿಕಾರ ನೀಡಿದೆ ಎಂದು ತಿಳಿಸಿದ ಅವರು ನಿಮ್ಮ ನೆರೆಹೊರೆಯಲ್ಲಿ ಮಕ್ಕಳ ಮೇಲೆ ನಡೆಯುವ ಶೋಷಣೆ ದೌರ್ಜನ್ಯ ಕುರಿತು 1098 ಅಥವಾ 112 ಸಹಾಯವಾಣಿಗಳಿಗೆ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಪಾಶ್ಚಿಮಾತ್ಯರನ್ನು ಅನುಕರಣೆ ಮಾಡುವುದು ಹೆಚ್ಚಾಗಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಪ್ರತಿದಿನ ಪ್ರಕರಣಗಳು ದಾಖಲಾಗುತ್ತಿವೆ ಎಂದರು.
ಮಕ್ಕಳು ವಿದ್ಯಾಭ್ಯಾಸದ ಸಮಯದಲ್ಲಿ ತಮಗೆ ಒಂದು ಬೇಲಿ ನಿರ್ಮಿಸಿಕೊಂಡು ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ಚಿಂತನೆಗಳನ್ನು ರೂಡಿಸಿಕೊಂಡು ಕಲಿತು ಉತ್ತಮ ಸಾಧನೆ ಮಾಡಲು ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಲೇಖಕಿ ರೂಪ ಹಾಸನ್ ಅವರು ಮಾತನಾಡಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವಂತೆ ಸರ್ಕಾರ ಆದೇಶ ಜಾರಿಗೊಳಿಸಿದೆ. ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಕಾಯ್ದೆ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಿದೆ ಎಂದು ತಿಳಿಸಿದರು.
18 ವರ್ಷದೊಳಗಿನ ಮಕ್ಕಳು ಗರ್ಭಿಣಿಯರಾಗುತ್ತಿದ್ದು, ದುರಂತಮಾಯವಾದ ಪ್ರಕರಣಗಳು ನಡೆಯುತ್ತಿವೆ. ಮಕ್ಕಳು ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದಾರೆ. ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವುದೇ ದುರ್ಘಟನೆಗಳಿಗೆ ಮಕ್ಕಳು ತುತ್ತಾಗದಂತೆ ರಕ್ಷಣೆ ಮಾಡುವುದರ ಜೊತೆಗೆ ಸುರಕ್ಷಿತವಾಗಿ ವಿದ್ಯಾಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು ಎಂದರಲ್ಲದೆ, ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಹಾಗೂ ತರಗತಿಗಳ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿಯು ಎಚ್ಚರವಹಿಸಿ ಮಕ್ಕಳನ್ನು ಪ್ರೀತಿ, ಕಾಳಜಿ ಹಾಗೂ ಅಕ್ಕರೆಯಿಂದ ನೋಡಿಕೊಳ್ಳುವ ವಾತಾವರಣ ಕಲ್ಪಿಸಬೇಕು ಜೊತೆಗೆ ಸುರಕ್ಷತಾ ಕ್ರಮಗಳಾಗಿ ಶಾಲೆಯಲ್ಲಿ ಸಿ.ಸಿ.ಟಿ.ವಿ. ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕಾತಿ, ವಾಹನ ಚಾಲಕರನ್ನು ಪರೀಕ್ಷಿಸಿ ಪ್ರಮಾಣ ಪತ್ರ ಹೊಂದಿರುವವರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಶಾಲೆಗಳಲ್ಲಿ ಆಪ್ತ ಸಮಲೋಚಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದರು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ವಾಪಸ್ ಕರೆತರಬೇಕು. ಜಿಲ್ಲೆಯಲ್ಲಿ 107 ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳಿದ್ದಾರೆ ಎಂಬ ಮಾಹಿತಿ ಇದೆ ಅವರಲ್ಲಿ ಅತ್ಯಂತ ನಿಷ್ಕೃಷ್ಟ ಸ್ಥಿತಿಯಲ್ಲಿರುವ 25 ಮಕ್ಕಳನ್ನು ಗುರುತಿಸಿ ನೀಡಿದರೆ ಪ್ರೇರಣಾ ಸಂಸ್ಥೆಯಿಂದ ಪ್ರತಿಯೊಂದು ಮಗುವಿನ ಹೆಸರಿಗೆ ಬ್ಯಾಂಕ್‌ನಲ್ಲಿ 1000 ರೂಗಳ ಠೇವಣಿ ಇಟ್ಟು ಪ್ರೇರಣ ಬಾಂಡ್ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿರ್ದೇಶಕ ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷರಾದ ಪೂರ್ಣಚಂದ್ರ ತೇಜಸಿ,ಡಿ.ವೈ.ಎಸ್.ಪಿ. ಮುರುಳೀಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಸಿಂಹ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಚಂದ್ರಶೇಖರ್ ಹಾಗೂ ಮತ್ತಿತರರು ಇದ್ದರು