

ಹಾಸನ: ಪೋಕ್ಸೋ ಕಾಯ್ದೆಯನ್ನು ಮಕ್ಕಳ ಹಿತರಕ್ಷಣೆಗಾಗಿ ಜಾರಿಗೆ ತರಲಾಗಿದ್ದು, ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ಪಾರು ಮಾಡುವುದು ಕಾಯ್ದೆಯ ಮುಖ್ಯ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ತಿಳಿಸಿದರು.
ನಗರದ ಮಹಾವೀರ ವೃತ್ತದ ಬಳಿ ಇರುವ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು, ನಾವುಗಳೆಲ್ಲ ವಿವಿಧ ಭಾಗಗಳಿಂದ ಬಂದಿದ್ದೇವೆ. ಅದರಲ್ಲೂ ಗ್ರಾಮೀಣ ಪ್ರದೇಶದಿಂದಲೂ ಬಂದಿದ್ದಾರೆ. ನಿಮ್ಮಿಂದ ಶಿಕ್ಷಣ ಪಡೆದ ಮಗು ಉನ್ನತ ಸ್ಥಾನಕ್ಕೆ ಹೋದಾಗ ಶಿಕ್ಷಕರಿಗೆ ಸಂತೋಷವಾಗುತ್ತದೆ. ಶಿಕ್ಷಕ ವೃತ್ತಿ ಎಂದರೆ ಹೆಮ್ಮೆಪಡುವಂತಹ ವೃತ್ತಿ ಆಗಿದೆ. ಗುಣಮಟ್ಟವನ್ನು ಕಾಪಾಡುವುದು ತಮ್ಮಲ್ಲೇ ಇರುತ್ತದೆ. ಸರ್ಕಾರಿ ಶಾಲೆಯಿಂದ ಓದಿದವರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ. ಗ್ರಾಮೀಣ ಮಕ್ಕಳಿಗೆ ಓದುವ ಆಸಕ್ತಿ ಹೆಚ್ಚು ಇರುತ್ತದೆ. ಯಾವುದೇ ಕಷ್ಟ ಬಂದರೂ ಎದುರಿಸುವ ಶಕ್ತಿ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಇರುತ್ತದೆ ಎಂದು ಹೇಳಿದರು.
ಪೋಕ್ಸೋ ಕಾಯ್ದೆ ಏಕೆ ಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯ. ಮಕ್ಕಳ ಹಕ್ಕು ರಕ್ಷಣೆಗಾಗಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ. ಜತೆಗೆ ಭಾರತದ ಸಂವಿಧಾನದ 15 (3)ನೇ ವಿಧಿಯ ಅಗತ್ಯವನ್ನೂ ಈ ಕಾಯ್ದೆ ಪೂರೈಸುತ್ತದೆ. ಪೋಕ್ಸೋ ಕಾಯ್ದೆ ಎಂದರೇನು? ಯಾವುದು ಅಪರಾಧ? ಕಾಯ್ದೆಯ ಲಕ್ಷಣಗಳೇನು? ಉದ್ದೇಶಗಳೇನು? ಯಾವಾಗ ಈ ಕಾಯ್ದೆ ಅನ್ವಯವಾಗುತ್ತದೆ. ತಿದ್ದುಪಡಿಗಳೇನು? ಎಂಬುವುದರ ಬಗ್ಗೆ ಎಲ್ಲರೂ ಮಾಹಿತಿ ತಿಳಿಯಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳ ಹಿತರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ಪಾರು ಮಾಡುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಈ ಕಾಯ್ದೆ ಯಾವುದೇ ಲಿಂಗತಾರತಮ್ಯ ಮಾಡುವುದಿಲ್ಲ. ಬಾಲಕಿ ಮತ್ತು ಬಾಲಕ ಇಬ್ಬರನ್ನೂ ಲೌಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಪರಿಗಣಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ಪ್ರಸನ್ನ, ಲಿಲ್ಲಿ, ಶಾರದಾ, ಚಂದ್ರಿಕಾ ಇತರರು ಉಪಸ್ಥಿತಿದ್ದರು.