ಮಕ್ಕಳ ಮೇಲೆ ಬೀದಿ ನಾಯಿ ದಾಳಿ

h13-Dog Bite
Published on

ಹುಬ್ಬಳ್ಳಿ : ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಇಲ್ಲಿನ ಹಳೇ ಹುಬ್ಬಳ್ಳಿ ಇಸ್ಲಾಂಪುರ ಹಾಗೂ ಅಲ್ತಾಫ ನಗರದಲ್ಲಿ ಶುಕ್ರವಾರ ನಡೆದಿದ್ದು, ಐವರು ಮಕ್ಕಳು ಗಾಯಗೊಂಡಿದ್ದಾರೆ.

ಮಹಮ್ಮದ ಸಾದಿಕ್ ಅಲಸಿ (8), ಇರ್ಷಾದ್ ಬುಕ್ಕಬೆಂಡರ್ (17), ಸೂಫಿಯಾನ ಧಾರವಾಡ (3), ಹಜರತ್ ಅಹಮ್ಮದ ಜಂಗ್ಲಿ (8) ಹಾಗೂ ಮಾವಿಯಾ ಕಿತ್ತೂರು (7) ಗಾಯಗೊಂಡ ಬಾಲಕರು.

ಹೋಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದೆ. ಒಂದೇ ಗಂಟೆಯ ಅವಧಿಯಲ್ಲಿ ಅಕ್ಕಪಕ್ಕದ ಓಣಿಯ ಐವರು ಮಕ್ಕಳ ಕಾಲು, ಕೈ, ತೊಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ಗಾಯಾಳು ಮಕ್ಕಳಿಗೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ತಿಳಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾಲಿಕೆ ವಿರುದ್ಧ ಆಕ್ರೋಶ: ಬೀದಿ ನಾಯಿಗಳ ಹಾವಳಿ ತಡೆಗಟ್ಟದ ಹು-ಧಾ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಹಲವು ಬಾರಿ ಪಾಲಿಕೆ ಗಮನಕ್ಕೆ ತರಲಾಗಿತ್ತು. ಇನ್ನಾದರೂ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕು. ಗಾಯಾಳುಗಳಿಗೆ ಪರಿಹಾರ ಘೊಷಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಅಲ್ತಾಫ ಕಿತ್ತೂರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net