

ಹಾಸನ : ಬೇಸಿಗೆ ಶಿಬಿರಗಳು ಅದರಲ್ಲೂ ಬಹು ಮುಖ್ಯವಾಗಿ ರಂಗ ತರಬೇತಿ ನೀಡುವ ಶಿಬಿರಗಳು ಮಕ್ಕಳ ಸಮಗ್ರ ಕ್ರಿಯಾತ್ಮಕ ಬೆಳವಣಿಗೆಗೆ ಹಾಗೂ ಮನೋವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ಹಾಸನ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ಹೇಳಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಹಾಸನ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ , ರಂಗ ಹೃದಯ ಕಲಾತಂಡ , ಸಂಸ್ಕೃತಿ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಕುಣಿಯೋಣ ಬಾರ ಬೇಸಿಗೆ ರಂಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷವಿಡೀ ಮಕ್ಕಳು ಪಠ್ಯ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ ಮತ್ತು ರಜೆ ಸಮಯದಲ್ಲಿ ಮೊಬೈಲ್ ಮತ್ತು ಟಿವಿಗಳಿಗೆ ಅಂಟಿಕೊಂಡುಬಿಡುತ್ತಾರೆ. ಇದರಿಂದ ಆಚೆ ಮಕ್ಕಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರದೆ ಮಕ್ಕಳು ಸಂತೋಷವಾಗಿ ಶಿಬಿರದಲ್ಲಿ ಪಾಲ್ಗೊಳ್ಳಲು ಪೋಷಕರು ಅನುವು ಮಾಡಿಕೊಡಬೇಕೆಂದು ಹೇಳುತ್ತಾ , ಮಕ್ಕಳ ಸಮಗ್ರ ವಿಕಸನಕ್ಕಾಗಿ ರಂಗಭೂಮಿ ಚಟುವಟಿಕೆಗಳ ಮಹತ್ವದ ವಿವರಿಸಿದರು.
ರೋಟರಿ ವಲಯ 9ರ ಅಸಿಸ್ಟೆಂಟ್ ಗವರ್ನರ್ ಹಾಗೂ ದಂತ ವೈದ್ಯೆ ಡಾ. ಪ್ರೀತಿ ಮೋಹನ್ ಮಾತನಾಡಿ, ಮಕ್ಕಳು ಶಾಲೆಗಳಲ್ಲಿ ಅವರ ವಯೋಮಾನದವರ ಜೊತೆಗೆ ಮಾತ್ರ ಒಟ್ಟಿಗಿರುತ್ತಾರೆ ಆದರೆ ಇಂತಹ ಶಿಬಿರಗಳಲ್ಲಿ ಎಲ್ಲಾ ವಯೋಮಾನದ ಮಕ್ಕಳು ಒಟ್ಟಿಗೆ ಕಲಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಿಗೆ ಬಾಂಧವ್ಯದ ಮಹತ್ವ ಅರಿವಾಗುತ್ತದೆ ಹಾಗೂ ಮಾನಸಿಕವಾಗಿ ಮಕ್ಕಳು ಮತ್ತಷ್ಟು ಸದೃಢರಾಗುತ್ತಾರೆ ಜೊತೆಗೆ ಮಕ್ಕಳಲ್ಲಿನ ವೇದಿಕೆ ಭಯ ಹೋಗಲಾಡಿಸುವುದರಲ್ಲಿ ಮತ್ತು ನಾಯಕತ್ವ ಗುಣ ಬೆಳೆಸುವುದರಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 50 ಮಕ್ಕಳು ಪಾಲ್ಗೊಂಡಿರುವ ಈ ವಿಶೇಷ ರಂಗ ಶಿಬಿರದಲ್ಲಿ ಮುಂದಿನ 15 ದಿನಗಳ ಕಾಲ ಜನಪದ, ರಂಗ ಗೀತೆಗಳು, ಪ್ರವಾಸಗಳು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಸೇರಿದಂತೆ ಅನೇಕ ಚಟುವಟಿಕೆಗಳ ಜೊತೆ ಜೊತೆಗೆ ನಾಟಕ ಕಲಿಕೆಯು ಪ್ರಮುಖವಾದ ಭಾಗವಾಗಿರುತ್ತದೆ ಹಾಗೂ ಕಡೆಯ ದಿನ ಶಿಬಿರದ ಕಡೆಯ ದಿನ ಮಕ್ಕಳು ಕಲಿತ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ಆಯೋಜಕರಾದ ಪೂಜಾ ರಘುನಂದನ್ ತಿಳಿಸಿದರು.
ಶಿಬಿರದ ಮೊದಲನೇ ಅವಧಿಯಲ್ಲಿ ಖ್ಯಾತ ಜನಪದ ಗಾಯಕ ಕುಮಾರ್ ಕಟ್ಟೆ ಬೆಳಗುಳಿ ಹಾಡಿಗೆ ಮಕ್ಕಳು ಕುಣಿಯುತ್ತ ಶಿಬಿರದ ಮೊದಲ ದಿನದ ಪ್ರಥಮ ಚಟುವಟಿಕೆಯಲ್ಲೇ ಖುಷಿಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಂಸ್ಕೃತಿ ಟ್ರಸ್ಟ್‌ನ ಪ್ರದೀಪ್, ರಂಗ ಹೃದಯ ತಂಡದ ಅಧ್ಯಕ್ಷ ಗುರುರಾಜ್ ಹುಲಿಕಲ್, ಸಾಹಿತಿ ಚಿಹ್ನೆನಹಳ್ಳಿ ಸ್ವಾಮಿ, ಪತ್ರಕರ್ತ ಕುಶ್ವಂತ್, ರಂಗ ಶಿಕ್ಷಕಿ ಸೌಜನ್ಯ ಹಾಗೂ ಇತರರು ಹಾಜರಿದ್ದರು.