

ಚನ್ನರಾಯಪಟ್ಟಣ: ಮಕ್ಕಳಲ್ಲಿರುವ ಪ್ರತಿಭೆಯನ್ನು ಸೂಕ್ತ ಸಮಯದಲ್ಲಿಯೇ ಹೊರ ತರದಿದ್ದಲ್ಲಿ ಅದು ಪ್ರದರ್ಶನಗೊಳ್ಳುವ ಮೊದಲೇ ನಶಿಸಿ ಹೋಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ರಾಣಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಪೆಂಡಾಲ್‌ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಯುವಜನೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಆಶುಭಾಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಗನವಾಡಿ ಹಂತದ ಬಾಲ್ಯದಿಂದಲೇ ಪ್ರತಿಭಾನ್ವಿತ ಪುಟಾಣಿಗಳಿಗೆ ಸಾಕಷ್ಟು ಅವಕಾಶ ನೀಡುವ ಮೂಲಕ ಅವರಿಗೆ ವೇದಿಕೆ ಕಲ್ಪಿಸಬೇಕು. ಗ್ರಾಮೀಣ ಮಕ್ಕಳಲ್ಲಿ ನೈಜತೆಯ ಪ್ರತಿಭೆ ಇದ್ದರೂ ಸಹಕಾರ ಹಾಗೂ ಪ್ರೋತ್ಸಾಹ ಸಿಗುವುದು ಕಡಿಮೆ ಎಂದರು.
ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದಂತೆ, ಒಮ್ಮೆ ಮನಬಂದಂತೆ ಗೀಚಿದರೆ ಮತ್ತೊಮ್ಮೆ ಅದೆಷ್ಟೇ ಪ್ರಯತ್ನಿಸಿದರೂ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಶೈಕ್ಷಣಿಕ ಹಂತದಿಂದಲೇ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ ಎಂದು ತಿಳಿಸಿದರು. ಶ್ರೀ ಸ್ವಾಮಿ ಅಮೋಹಾನಂದ ಜೀ ಮಹಾರಾಜರು ಆಶಿರ್ವಚನ ನೀಡಿದರು.
ಬಳಿಕ ಆಶುಭಾಷಣ ಸ್ವರ್ಧೆ ನಡೆಯಿತು. ತಹಸೀಲ್ದಾರ್ಬಿ .ಎಂ.ಗೋವಿಂದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಬಿಆರ್‌ಸಿ ಅನಿಲ್‌ಕುಮಾರ್, ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್, ಪರಿಸರ ಪ್ರೇಮಿ ಚ.ನಾ.ಅಶೋಕ್, ಪ್ರಮುಖರಾದ ಡಾ.ರಮೇಶ್ ಬಾಬು, ಸಿ.ವಿ.ಲೋಹಿತ್ ಹಾಗೂ ಇತರರು ಇದ್ದರು.