ಮಕ್ಕಳ ಹಕ್ಕು ರಕ್ಷಣೆಗೆ ಆದ್ಯತೆ ನೀಡಿ

news update
ವಿಜಯಪುರ ನಗರದ ರೈಲ್ವೆ ಸ್ಟೇಶನ ರಸ್ತೆಯ ಸರಕಾರಿ ಮಕ್ಕಳ ವೀಕ್ಷಣಾಲಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರುವ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಉದ್ಘಾಟಿಸಿ ಅವರು ಮಾತನಾಡಿದರು. ಕುಮಾರ ದೇವರಗುಡಿ, ಸಂಗಮೇಶ ಕಟ್ಟಿಮನಿ, ಸ್ಪೂರ್ತಿ ಕುಮಾರ, ಲಕ್ಷ್ಮಣ ಭಜಂತ್ರಿ, ಅಕ್ಷತಾ ಬಡಿಗೇರ, ಸರಸ್ವತಿ ನುಚ್ಚನ್ನವರ, ನೀಲಮ್ಮ ಅನಗುಂದಿ ಮುಂತಾದವರು ಉಪಸ್ಥಿತರಿದ್ದರು.
Published on


ವಿಜಯಪುರ: ಅಪರಾಧಿತ ಕೃತ್ಯವನ್ನು ಎಸಗಿದ್ದಾರೆ ಎಂದು ಆಪಾದಿಸಲ್ಪಟ್ಟ ಅಥವಾ ಅಂತಹ ಕೃತ್ಯವನ್ನು ಎಸಗಿದ 18 ವರ್ಷದೊಳಗಿನ ಕಾನೂನಿನೊಡನೆ ಸಂಘರ್ಷಕ್ಕಿಡಾದ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಹೇಳಿದರು.

ನಗರದ ರೈಲ್ವೆ ಸ್ಟೇಶನ ರಸ್ತೆಯ ಸರಕಾರಿ ಮಕ್ಕಳ ವಿಕ್ಷಣಾಲಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರದು ಉದ್ಘಾಟಿಸಿ ಅವರು ಮಾತನಾಡಿದರು.

ಸ್ನೇಹಿ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಿ, ಮನ ಪರಿವರ್ತನೆಗೊಳಿಸಿ, ಸಮಾಜಕ್ಕೆ ಮತ್ತು ದೇಶಕ್ಕೆ ಪ್ರತಿ ಮಗು ಅತ್ಯಮೂಲ್ಯ ಕೊಡುಗೆ ನೀಡುವಂತಾಗಬೇಕು. ಸಂವಿಧಾನ ಬದ್ಧವಾಗಿ ಮಕ್ಕಳ ನ್ಯಾಯ ಕಾಯ್ದೆ ಪರಿಮಿತಿಯಲ್ಲಿ ಮಕ್ಕಳನ್ನು ವಶಕ್ಕೆ ಪಡೆಯುವ, ಉಳಿಸಿಕೊಳ್ಳುವ, ಕಾನೂನು ಕ್ರಮ ಕೈಕೊಳ್ಳುವ ,ದಂಡ ಅಥವಾ ಪರಿವೀಕ್ಷಣಾಲಯ ವಾಸ, ಪುರ್ವಸತಿ ಮತ್ತು ಮಗುವಿನ ಸಾಮಾಜಿಕ ಕ್ಷೇತ್ರದಲ್ಲಿ ಮರುಸ್ಥಾಪನೆ ಕಾರ್ಯ ಕೈಗೊಳ್ಳಬೇಕು. ಮಕ್ಕಳ ಹಕ್ಕುಗಳ ನಿರ್ವಹಣೆಯಲ್ಲಿ ಸರಕಾರ ಇತರ ಇಲಾಖೆಗಳು ಸಿಬ್ಬಂದಿ ವರ್ಗ ಹಾಗೂ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರವಹಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಹಕರಿಸಬೇಕೆಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಧರ ಕುಲಕರ್ಣಿ ಮಾತನಾಡಿ, ಬಾಲ ನ್ಯಾಯ ಕಾಯ್ದೆಯಡಿ ಅನೇಕ ಸಂಗತಿಗಳು ಮಕ್ಕಳ ಹಕ್ಕುಗಳ ರಕ್ಷಣೆ ಪರವಾಗಿದ್ದು, ಗ್ರಾಮ ಮಟ್ಟದಿಂದ ಅಂತಾರರಾಷ್ಟ್ರೀಯ ಮಟ್ಟದವರೆಗೆ ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣೆಗೆ ವ್ಯವಸ್ಥಿತ ಕ್ರಮ ಕೈಕೊಳ್ಳಲಾಗುತ್ತಿದೆ. ಆದರೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಕ್ಕಳ ಮೇಲಿನ ದೌರ್ಜನ್ಯ ಉಂಟಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಸರ್ಕಾರ ಶಿಶು ಅಭಿವೃದ್ದಿ ಪ್ರಾಧಿಕಾರ, ಜಿಲ್ಲಾ ಶಿಶು ಸಂರಕ್ಷಣಾ ಘಟಕ, ಅನೇಕ ಇಲಾಖೆಗಳು ಮಕ್ಕಳ ಕಲ್ಯಾಣ ಸಮಿತಿ ಬಾಲ ನ್ಯಾಯ ಮಂಡಳಿ ಮಕ್ಕಳ ವಿಶೇಷ ಪೋಲಿಸ ಘಟಕ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರು ಶಾಂತಿ ಸಂದೇಶ ಟ್ರಸ್ಟ್ ಮಕ್ಕಳ ಮಾನಸಿಕ ಆರೋಗ್ಯ ತಜ್ಞ ಸಿಸ್ಟರ್ ಸೇಲಿನಾ ಮಾತನಾಡಿ. ಮಕ್ಕಳ ಮನಸ್ಸನ್ನು ಹೆದರಿಕೆ ಬೆದರಿಕೆಗಳಿಗಿಂತ ಪ್ರೀತಿ, ವಾತ್ಸಲ್ಯದಿಂದ ಮನಪರಿವರ್ತನೆ ಮಾಡಲು ಸಾಧ್ಯ. ಮಕ್ಕಳು ದಾರಿ ತಪ್ಪಲು ಕೌಟುಂಬಿಕ ಪರಿಸರ ದೈಹಿಕ , ಮಾನಸಿಕ ಕೌಟುಂಬಿಕ ವೈಯಕ್ತಿಕ ಹಲವಾರು ಕಾರಣಗಳಿರಬಹುದು ಎಂದರು.
ಶಿಕ್ಷೆ, ದಂಡದ ಭಯಕ್ಕಿಂತ ಆಟ, ಪಾಠ ನೈತಿಕ ಮೌಲ್ಯಗಳ ಬೋಧನೆ ಮಾಡಿ ಮಕ್ಕಳನ್ನು ಸರಿದಾರಿಗೆ ತರಲು ಮತ್ತು ಕಾನೂನಿನೊಡನೆ ಸಂಘರ್ಷಕ್ಕಿಡಾದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕಂಕಣ ಬದ್ದರಾಗೋಣ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಭಾರತದ ಸಂವಿಧಾನದ ಆಶಯಗಳು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳು ಸ್ವಾತಂತ್ರೃ, ಭ್ರಾತತ್ವ, ಸಮಾನತೆ, ಬಹುತ್ವ ಭಾಗವಹಿಸುವಿಕೆ, ಸಂವಾದ ಹಾಗೂ ಮತ್ತಿತರ ಲಕ್ಷಣ ಹಕ್ಕು ಮತ್ತು ಕರ್ತವ್ಯಗಳನ್ನು ವಿವರಿಸಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಆಪ್ತ ಸಮಾಲೋಚಕ ಶ್ರೀಕಾಂತ ಬಿರಾದಾರ (ಹಂಚಿನಾಳ) ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವನೇಶ್ವರಿ ಉಪ್ಪಾರ ನಿರೂಪಿಸಿದರು. ನೀಲಮ್ಮ ಬಿರಾದಾರ ವಂದಿಸಿದರು.
ಕುಮಾರ ದೇವರಗುಡಿ, ಸಂಗಮೇಶ ಕಟ್ಟಿಮನಿ, ಸ್ಪೂರ್ತಿ ಕುಮಾರ, ಲಕ್ಷ್ಮಣ ಭಜಂತ್ರಿ, ಅಕ್ಷತಾ ಬಡಿಗೇರ, ಸರಸ್ವತಿ ನುಚ್ಚನ್ನವರ, ನೀಲಮ್ಮ ಅನಗುಂದಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net