ಮಕ್ಕಳ ಮನಸ್ಸನ್ನು ಬೋನ್ಸಾಯ್ ಗಿಡಗಳಂತೆ ಕುಬ್ಜಗೊಳಿಸದಿರಿ: ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ

15
Published on

ಮೈಸೂರು: ಮಕ್ಕಳಲ್ಲಿ ದೊಡ್ಡ ಆಲೋಚನೆಗಳನ್ನು ಬಿತ್ತದೆ ಪಾಲಕರು ಅವರನ್ನು ಬೋನ್ಸಾಯ್ ಗಿಡಗಳಂತೆ ಕುಬ್ಜಗೊಳಿಸುತ್ತಿದ್ದಾರೆ ಎಂದು ಶ್ರೀವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾಸವಿ ಭವನ, ಅತಿಥಿ ಗೃಹ, ವಿದ್ಯಾರ್ಥಿನಿಲಯ, ವಾಸವಿ ಅಕಾಡೆಮಿ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೊಡ್ಡ ಆಲದ ಮರವಾಗುವಷ್ಟು ಶಕ್ತಿ ಮಕ್ಕಳಲ್ಲಿ ಇರುತ್ತದೆ. ಆದರೆ ಅವರಿಗೆ ಚಿಕ್ಕಂದಿನಿಂದಲೇ ಕೇವಲ ನೀನು ವೈದ್ಯ, ಇಂಜಿನಿಯರ್ ಆಗಬೇಕು ಎನ್ನುವುದಕ್ಕೆ ಸೀಮಿತಗೊಳಿಸಿ ಬೋನ್ಸಾಯ್ ಗಿಡದಂತೆ ಕುಬ್ಜಗೊಳಿಸುತ್ತಿದ್ದೇವೆ. ನೀನು ದೊಡ್ಡ ಉದ್ಯಮಿಯಾಗು, ಹಲವರಿಗೆ ಉದ್ಯೋಗ ನೀಡು, ಒಬ್ಬ ನಾಯಕನಾಗು, ಪ್ರಧಾನಿಯಾಗು, ಮಂತ್ರಿಯಾಗು ಎಂದು ಹೇಳುವುದೇ ಇಲ್ಲ. ನಾವು ದೊಡ್ಡ ದೊಡ್ಡ ಆಲೋಚನೆಯನ್ನು ಮಕ್ಕಳಲ್ಲಿ ಭಿತ್ತಿದರೆ, ಅದು ಸ್ವಲ್ಪವಾದರೂ ಫಲ ಕೊಡುತ್ತದೆ ಎಂದು ಸಲಹೆ ನೀಡಿದರು.
ವಿಶ್ವಕ್ಕೆ ಸನಾತನ ಧರ್ಮ ಸಾರಿದ್ದ ಭಾರತದಲ್ಲಿಯೇ ಧಾರ್ಮಿಕ ಭಾವನೆಗಳು, ದೇವಸ್ಥಾನಕ್ಕೆ ಹೋಗುವುದು ಕಡಿಮೆ ಅಗುತ್ತಿದೆ. ದೂರದ ಅಮೆರಿಕಾದಲ್ಲಿ ವಾಸವಿಯ 11 ಮಂದಿರಗಳಿವೆ. ಅಲ್ಲಿಗೆ ಪಂಚೆ, ಅಂಗಿ, ಧಾವಣಿ, ಸೀರೆಯುಟ್ಟು ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ ನಮ್ಮ ನೆಲದಲ್ಲಿಯೇ ದೇವಾಲಯಕ್ಕೆ ಹೋಗುವವರು ವಿರಳವಾಗುತ್ತಿದ್ದಾರೆ ಎಂದು ಬೇಸರಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಅವಲಂಬನೆ ಹೆಚ್ಚಾಗುತ್ತಿದ್ದು, ಚೈನೀಸ್, ಇಟಾಲಿಯನ್ ಡಿನ್ನರ್‌ಗೆ ಹೋಗುವ ಪದ್ಧತಿ ಹೆಚ್ಚಾಗಿದೆ. ಆದರೆ ಮಕ್ಕಳಿಗೆ ಸಂಸ್ಕಾರ, ದೇವಸ್ಥಾನಕ್ಕೆ ಹೋಗುವ ಪದ್ಧತಿಯನ್ನು ಬೆಳೆಸುತ್ತಿಲ್ಲ. ಹಾಗಾಗಿ ನಾವು ನಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಕರೆದೊಯ್ದು ದೇವರ ದರ್ಶನ ಮಾಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇರೆ ದೇಶಗಳಿಗೆ ನಮ್ಮನ್ನು ಆಹ್ವಾನಿಸಿದಾಗ ಪ್ರವಚನಕ್ಕೆ ಕರೆಯುತ್ತಾರೆ. ಆದರೆ ನಮ್ಮಲ್ಲಿ ಪ್ರವಚನಕ್ಕಾಗಿ ಕರೆದ ಉದಾಹರಣೆಯೇ ಇಲ್ಲ. ದೇವಸ್ಥಾನದ ಉದ್ಘಾಟನೆ, ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ವಾಮೀಜಿಗಳನ್ನು ಸೀಮಿತಗೊಳಿಸಿ ಉತ್ಸವ ಮೂರ್ತಿಯನ್ನಾಗಿ ಮಾಡಲಾಗುತ್ತಿದೆ ಎಂದರು.
ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ನಮ್ಮ ಸನಾತನ ಧರ್ಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕುವಂತೆ ಮಾಡಿದರು. ಇಂತಹ ವಿಶ್ವಮಾನ್ಯತೆ ಹೆಚ್ಚಾಗಬೇಕು. ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವಚನಕ್ಕಾಗಿ ನಮ್ಮನ್ನು ಆಹ್ವಾನಿಸಿದ್ದು, ಸೆಪ್ಟೆಂಬರ್‌ನಲ್ಲಿ ತೆರಳುತ್ತಿದ್ದೇವೆ. ಭಾರತೀಯ ಬೇರಿನೊಂದಿಗೆ ಅಂತಾರಾಷ್ಟ್ರೀಯ ರಾಯಭಾರಿಗಳಾಗಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಅನೇಕರಿಗೆ ಉದ್ಯೋಗ ನೀಡುತ್ತಿದ್ದ ಆರ‌್ಯವೈಶ್ಯರು ಈಗ ಉದ್ಯೋಗಕ್ಕಾಗಿ ಕೈ ಚಾಚುತ್ತಿದ್ದಾರೆ. ಇದು ತಪ್ಪಿ ನಾವೇ ಉದ್ಯೋಗ ನೀಡುವಂತೆ ಆಗಬೇಕು. ನಮ್ಮ ಆಲೋಚನಾ ಕ್ರಮಗಳು ಚಿಕ್ಕದಾಗಿರುತ್ತವೆ. ನಮ್ಮ ಮಗು ಶಾಲೆಗೆ ಹೆಚ್ಚು ಅಂಕ ಪಡೆದಿದ್ದಾನೆ. ನಮ್ಮ ಕುಟುಂಬಕ್ಕೆ ಹೆಚ್ಚು ಅಂಕ ಪಡೆದ ಎಂದು ಹೆಮ್ಮೆ ಪಡುತ್ತಿದ್ದೇವೆ. ನಾವು ಈಗ ಅಕಾಡೆಮಿ ಮೂಲಕ ತಾಂತ್ರಿಕ, ಆರ್ಥಿಕ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯ ನೀಡಿ ಉದ್ಯಮಿಗಳನ್ನಾಗಿ ಮಾಡುತ್ತೇವೆ ಎಂದರು.
ಆರೈವೈಶ್ಯರು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ರಾಜ್ಯದಲ್ಲಿ ಮುಂದಿನ 10 ವರ್ಷದಲ್ಲಿ ಕನಿಷ್ಠ 10 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಬೆಂಗಳೂರಿನಲ್ಲಿ ವಾಸವಿ ಎಜುಕೇಷನ್ ಕ್ಯಾಂಪಸ್ ತೆರೆಯುತ್ತಿದ್ದೇವೆ. ಅಲ್ಲಿ ಎಲ್ಲ ಮಾದರಿಯ, ಎಲ್ಲ ಹಂತದ ಶಿಕ್ಷಣ ದೊರೆಯುವಂತೆ ಮಾಡುತ್ತಿರುವುದಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಭವನ ಉದ್ಘಾಟಿಸಿ ಮಾತನಾಡಿದರು. ಮಹಾಸಭಾದ ಪ್ರಮುಖರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net