

ನಾಪೋಕ್ಲು; ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವವಾದದ್ದು ಜಾನಪದ ಪರಿಷತ್‌ನ ಕೊಡುಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದಿನದ ಹೆಚ್ಚಿನ ಸಮಯವನ್ನು ಮಕ್ಕಳು ಪಾಲಕರೊಂದಿಗೆ ಕಳೆಯುತ್ತಾರೆ. ಹೀಗಾಗಿ ಮಕ್ಕಳ ಭವಿಷ ್ಯವನ್ನು ರೂಪಿಸುವಲ್ಲಿ ಶಿಕ್ಷಕರಿಗಿಂತಲೂ ಪಾಲಕರ ಪಾತ್ರ ಮಹತ್ವವಾದದ್ದು ಎಂದರು.
ಮಕ್ಕಳು ಕಲಿಯುವ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಪಾಲಕರು ಗೌರವ ಹೊಂದಿರಬೇಕು. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದ ಬಳಿಕ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಸುಮ್ಮನಾಗಬಾರದು. ಬದಲಾಗಿ ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರೀರ ಜಗತ್‌ತಿಮ್ಮಯ್ಯ ಮಾತನಾಡಿ, ಶಿಕ್ಷಣ ವಿಚಾರದಲ್ಲಿ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಶಿಕ್ಷಣದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಎಳೆಯ ವಯಸ್ಸಿನಲ್ಲಿ ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡುವ ಅವಕಾಶಗಳಿವೆ ಎಂದರು.
ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ ಭಾಷೆಯೊಂದಿಗೆ ಇತರ ಭಾಷೆಗಳ ಬಗ್ಗೆಯೂ ಹೆಚ್ಚಿನ ಜ್ಞಾನ ಹೊಂದಬೇಕು. ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಧಾರವಾಡದ ಉದ್ಗಂ ಫೌಂಡೇಷನ್ ಅಧ್ಯಕ್ಷ ಶರಣ್ ಹೊಸಮನಿ ಮಾತನಾಡಿದರು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ದಿವ್ಯಾ ಗಣೇಶ್, ನಿರ್ದೇಶಕಿ ಭವ್ಯಾ, ಮ್ಯಾನೇಜರ್ ಕೊಂಡಿರ ತಮ್ಮಯ್ಯ, ಶಿಕ್ಷಕಿ ರಮ್ಯಾ ನಂಜಪ್ಪ ಇತರರಿದ್ದರು.