ಮಕ್ಕಳ ಭವಿಷ್ಯ ಉಜ್ವಲಕ್ಕೆ ಪ್ರಯತ್ನಿಸಿ

Gangotri School - Copy
Published on

ಬೀದರ್: ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರಯತ್ನಿಸಬೇಕು ಎಂದು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಬಸವನಗರ ಕಾಲೊನಿಯ ಗಂಗೋತ್ರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬೆಳ್ಳಿ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ಹೆಚ್ಚು ಅವಶ್ಯಕವಾಗಿದೆ ಎಂದು ತಿಳಿಸಿದರು.
ಗಂಗೋತ್ರಿ ಶಾಲೆ ಉತ್ತಮ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಹೇಡೆ ಮಾತನಾಡಿ, ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ನುಡಿದರು.
ಸಂಸ್ಥೆಯ ಉಪಾಧ್ಯಕ್ಷ ಕುಶಾಲರಾವ್ ಪಾಟೀಲ ಮಾತನಾಡಿ, ಓದಿನಲ್ಲಿ ಏಕಾಗ್ರತೆ ಕಾಯ್ದುಕೊಳ್ಳಲು ಪಾಲಕರು ಮಕ್ಕಳನ್ನು ಮೊಬೈಲ್‍ನಿಂದ ದೂರ ಇರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಸಿದ್ದರಾಮಯ್ಯ ಹಿರೇಮಠ ಮಾತನಾಡಿ, ಸಂಸ್ಥೆಯು ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಅವಿರತ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವಕೀಲ ವಿಜಯರೆಡ್ಡಿ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಉತ್ತಮ ಪಾಲಕರು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಉದ್ಯಮಿ ಸಂತೋಷ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಾನಂದ ನಾಸೆ, ಗಾಂಧಿಗಂಜ್ ಪೊಲೀಸ್ ಠಾಣೆಯ ಎಎಸ್‍ಐ ಅಶೋಕ ಕೋಟೆ ಇದ್ದರು.
ಮುಖ್ಯಶಿಕ್ಷಕಿ ಕಲಾವತಿ ಎಸ್. ಪರಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಸನ್ಮುಖಯ್ಯ ಹಿರೇಮಠ ಸ್ವಾಗತಿಸಿದರು. ಸಂತೋಷ ಕೊಪ್ಪೇರ್ ನಿರೂಪಿಸಿದರು. ಶಾಂತಾ ಹೂಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net