

ದಾವಣಗೆರೆ: ಮಕ್ಕಳ ಹಿತಾಸಕ್ತಿ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಜಿಲ್ಲಾ ವಿಜ್ಞಾನ ಪರಿಷತ್‌ನ ಸಹಯೋಗದೊಂದಿಗೆ ವಾರಾಂತ್ಯದ ಚಟುವಟಿಕೆಗಳನ್ನು ಜಿಲ್ಲಾ ಬಾಲಭವನದಲ್ಲಿ ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಹೇಳಿದರು.
ಜಿಲ್ಲಾ ಬಾಲಭವನದಲ್ಲಿ ಸೋಮವಾರ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿವಿಧ ಇಲಾಖೆಗಳ ನೆರವು ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಬಾಲಭವನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಚಿಂತನೆ ಇದೆ ಎಂದು ಹೇಳಿದರು.
ಪಾಲಿಕೆ ಆಯುಕ್ತೆ ಎನ್. ರೇಣುಕಾ ಮಾತನಾಡಿ ಮಕ್ಕಳು ಮೊಬೈಲ್, ಟಿ.ವಿಗಳಿಂದ ದೂರವಾಗಿ ಕ್ರಿಯಾಶೀಲತೆಯಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಕರಕುಶಲ ವಸ್ತುಗಳನ್ನು ತಯಾರಿಸಿರುವುದು ಗಮನಾರ್ಹ. ಶಿಬಿರದಲ್ಲಿ ಸಂಪದಾದಿಸಿದ ಸ್ನೇಹ ಉಪಯೋಗಕ್ಕೆ ಬರಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ ಮುಂಬರುವ ದಿನಗಳಲ್ಲಿ ತಮ್ಮ ಇಲಾಖೆ ವತಿಯಿಂದ ಮಕ್ಕಳಿಗಾಗಿ ಚಿಗುರು ಎಂಬ ಕಾರ್ಯಕ್ರಮವನ್ನು ಬಾಲಭವನದಲ್ಲಿ ಹಮ್ಮಿಕೊಳ್ಳಲಿದ್ದು ಚಿಣ್ಣರು ಇದರ ಲಾಭ ಪಡೆಯಬೇಕೆಂದರು.
ಜಿಲ್ಲಾ ನಿರೂಪಣಾಧಿಕಾರಿ ರಾಜಕುಮಾರ್ ರಾಥೋಡ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಸನ್ನ ಕುಮಾರ್, ವಿಜ್ಞಾನ ಪರಿಷತ್‌ನ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಇದ್ದರು.
ಮಾ. 15ರಿಂದ ಸಪ್ತಾಹ ಕಾಲ ಆಯೋಜಿಸಿದ್ದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಂ.ಗುರುಸಿದ್ದಸ್ವಾಮಿ, ಯಶಾ ದಿನೇಶ್, ಸುಮಾ ಬಸವರಾಜ್, ಲೀಲಾ, ಲಕ್ಷ್ಮೀ ಮೊದಲಾದವರು ನೃತ್ಯ, ಗಾಯನ, ಚಿತ್ರಕಲೆ, ಪೇಂಟಿಂಗ್, ಯೋಗ, ವಿಜ್ಞಾನ ವಿಷಯ, ನಗೆ ಹಬ್ಬ, ಶ್ರೀ ಮಾಡೆಲಿಂಗ್, ಮ್ಯಾಜಿಕ್ ಮ್ಯಾಥ್ಸ್, ವಿವಿಧ ರೀತಿಯ ಕೃತಕ ಹೂಗಳು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.
--------------------